ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ, 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಟ್ಟ ಕಾಂಗ್ರೆಸ್: ಬಿಜೆಪಿ ಆಕ್ರೋಶ

ಬೆಂಗಳೂರು, ಜುಲೈ 31: ಕೇರಳದಲ್ಲಿ ನಂದಿನಿ ಮಾರುಕಟ್ಟೆ ವಿಸ್ತರಣೆಗೆ ವಾಪಸ್ ಬೆನ್ನಲ್ಲೇ ತಿರುಪತಿ ಲಡ್ಡು  ತಯಾರಿಕೆಗೆ ಬಳಸುತ್ತಿದ್ದ ನಂದಿನಿ ತುಪ್ಪದ ಪೂರೈಕೆಯನ್ನು ಕರ್ನಾಟಕ ಸರ್ಕಾರವೇ ಸ್ಥಗಿತಗೊಳಿಸಿದೆ. ಈ ಬಗ್ಗೆ  ಬಿಜೆಪಿ ರಾಜ್ಯ ಘಟಕ, ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದೆ.

“ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ. ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ

ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್‌ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯಾತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯ ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ” ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್​ ಅನ್ನು ಕೈಬಿಟ್ಟಿದೆ, ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ. ಹೀಗಾಗಿ ಲಡ್ಡು ತಯಾರಿಕೆಗಾಗಿ ಸರಬರಾಜು ಆಗುತ್ತಿದ್ದ ತುಪ್ಪವನ್ನು ಇನ್ನು ಮುಂದೆ ಕಳುಹಿಸಲಾಗುವುದಿಲ್ಲ ಎಂದು ಕೆಎಂಎಫ್​ ಅಧ್ಯಕ್ಷ ಭೀಮನಾಯ್ಕ್ ಹೇಳಿದ್ದರು. ಈ ಬಗ್ಗೆ ಟಿವಿ9ಗೆ ಸ್ಪಷ್ಟನೆ ನೀಡಿದ ಭೀಮನಾಯ್ಕ್, ದರ ವಿಚಾರದಲ್ಲಿ ತಿರುಪತಿಗೆ ತುಪ್ಪ ಪೂರೈಕೆ ಮಾಡಲು ಆಗಿಲ್ಲ. ಅವರ ದರಕ್ಕೆ ನಂದಿನಿ ತುಪ್ಪ ಪೂರೈಕೆ ಮಾಡಲು ಆಗಲ್ಲ ಎಂದಿದ್ದೆವು. 2022ರಿಂದ ನಾವು ತಿರುಪತಿಗೆ ನಂದಿನಿ ತುಪ್ಪ ಪೂರೈಸುತ್ತಿಲ್ಲ. ನಾವು ಕೇಳಿದ ದರಕ್ಕೆ ಒಪ್ಪಿದre ನಂದಿನಿ ತುಪ್ಪ ಪೂರೈಕೆ ಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರ ಇದ್ದಾಗಲೇ ನಂದಿನಿ ತುಪ್ಪ ಪೂರೈಕೆ ಸ್ಥಗಿತ ಆಗಿದೆ. ಕೆಎಂಎಫ್​ ವಿಚಾರವಾಗಿ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಕೆಎಂಎಫ್​ ಕರ್ನಾಟಕ ಸಂಸ್ಥೆ, ಅಮುಲ್​ಗೆ KMF​ ವಿಲೀನ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.

ಕೆಎಂಎಫ್ ಎಂಡಿ ಹೇಳುವುದೇನು?

ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ತಡೆ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಕೆಎಂಎಫ್ ಎಂಡಿ ಜಗದೀಶ್, ಒಂದೂವರೆ ವರ್ಷದ ಹಿಂದೆಯೇ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿದೆ. 2021-22ರಲ್ಲಿ 345 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಿದ್ದೇವೆ. ಟೆಂಡರ್ ಮೂಲಕ ಭಾಗವಹಿಸಿದರೆ ನಮ್ಮ ರೈತರಿಗೆ ನಷ್ಟವಾಗುತ್ತದೆ. ಕಳೆದ ಬಾರಿ ನಾವು ಬಿಡ್ಡಿಂಗ್​ನಲ್ಲಿ L3 ಇದ್ದರೂ ಖರೀದಿಸಿದ್ದಾರೆ. ಕೆಎಂಎಫ್​ನಿಂದಲೇ ನಂದಿನಿ ತುಪ್ಪ ಖರೀದಿಸಿದ್ದಾರೆ. ಈಗಲೂ ನಮ್ಮ ಬೆಲೆಗೆ ಖರೀದಿಸಲು ಸಿದ್ಧರಿದ್ದರೆ ಪೂರೈಕೆ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲ, ಈಗ ನಿಲ್ಲಿಸಿದ್ದಾರೆ ಅನ್ನೋದು ಸುಳ್ಳು ಎಂದರು.