ಸೋರುತಿಹುದು ಮನೆಯ ಮಾಳಿಗೆ; ಮಲಗಲು ಗುಡಿ ಗುಂಡಾರವೇ ಗತಿ!

ಹನುಮಸಾಗರ (ಜು.27) :  ಸತತ ಎಂಟ್ಹತ್ತು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಹಳ್ಳಿಗಳ ಮಣ್ಣಿನ ಮಾಳಿಗೆಯ ಮನೆಗಳು ಸೋರುತ್ತಿವೆ.

ಬಹುತೇಕ ಗ್ರಾಮದಲ್ಲಿ ಮಣ್ಣಿನ ಮಾಳಿಗೆಗಳ ಸಂಖ್ಯೆಯೇ ಅಧಿಕ. ಸತತ ತುಂತುರು ಮಳೆ ಸುರಿಯುತ್ತಿರುವುದರಿಂದ ಮಳೆ ನೀರು ಮಾಳಗಿಯಿಂದ ಮುಂದೆ ಚಲಿಸದೇ ಅಲ್ಲಿಯೇ ಇಂಗಿ ಮನೆಯೊಳಗೆ ಜಿನುಗುತ್ತಿದೆ. ಇದರಿಂದ ಮನೆಯಲ್ಲಿಯ ವಸ್ತುಗಳನ್ನು ನೀರಿನಿಂದ ರಕ್ಷಣೆ ಮಾಡಿಕೊಳ್ಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಬಿಸಿಲು ಕಾಣದೇ ಎಂಟ್ಹತ್ತು ದಿನಗಳಾದ್ದರಿಂದ ದಿನನಿತ್ಯದ ಬಟ್ಟೆಗಳು ಒಣಗುತ್ತಿಲ್ಲ. ದಿನ ನಿತ್ಯ ಸೋರುತ್ತಿರುವ ಮಾಳಿಗೆಯ ನೀರು ಮನೆಯಲ್ಲಿ ಸೋರುತ್ತಿರುವುದರಿಂದ ಬಟ್ಟೆಗಳು ಒಣಗಿಸಲಿಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕೆಲವೊಂದು ಮನೆಯಲ್ಲಿ ಮನೆಯ ತುಂಬ ಜಿನುಗುತ್ತಿರುವ ನೀರಿನಿಂದ ಎಲ್ಲಿಯು ಕುಳಿತುಕೊಳ್ಳಲು, ಮಲಗಲು ಪರದಾಡುವ ಸ್ಥಿತಿ ಇದೆ. ಕೆಲವು ಮನೆಗಳಲ್ಲಿ ಅಡುಗೆ ತಯಾರಿಸಲೂ ಹೆಣಗಾಡಬೇಕಿದೆ.

ಸೋರುತ್ತಿರುವ ಮನೆಯೆಲ್ಲ ತಂಪುಮಯವಾಗಿದೆ. ಹಗಲಲ್ಲಾದರೆ ಹೇಗೋ ಕಾಲ ಕಳೆಯುವ ಜನರು ರಾತ್ರಿಯಾಯಿತೆಂದರೆ ಮಲಗಲು ತೊಂದರೆ ಅನುಭವಿಸುತ್ತಿದ್ದಾರೆ. ಕುಟುಂಬ ಸಮೇತವಾಗಿ ಗ್ರಾಮದ ಸಮುದಾಯ ಭವನ, ದೇವಸ್ಥಾನ, ಬೀಗರ ಮನೆಯಲ್ಲಿ ಮಲಗುವುದು ಅನಿವಾರ್ಯವಾಗಿದೆ.

ಹಲವಾರು ಮನೆಗಳು ಈಗಾಗಲೇ ಮಳೆಯಿಂದ ನೆನೆದು ಹೋಗಿವೆ. ಕೆಲವು ಗೋಡೆಗಳು ಬಿರುಕು ಬಿಟ್ಟಿದ್ದರಿಂದ ಯಾವಾಗ ಮನೆಗಳು ಕುಸಿದು ಬೀಳುತ್ತವೆ ಎಂಬುದನ್ನು ತಿಳಿಯದೇ ಭಯದ ವಾತಾವರಣದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ.

ಮನುಷ್ಯರು ಹೇಗೋ ಮಳೆ ನೀರಿನಿಂದ ತಪ್ಪಿಸಿಕೊಂಡು ಗುಡಿ ಗುಂಡಾರಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆದರೆ ಸಾಕಿದ ಎತ್ತು, ಎಮ್ಮೆ, ಆಕಳುಗಳಿಗೆ ಮನೆಯಲ್ಲಿಯ ದನದ ಡೊಡ್ಡಿಯೇ ಗತಿ. ಅವುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಚಿಂತೆ ರೈತ ಸಮುದಾಯದಲ್ಲಿ ಕಾಡುತ್ತಿದೆ.

ಸೋರುತ್ತಿರುವ ಮಳೆ ನೀರಿನಿಂದ ಮನೆ ಛಾವಣಿ ಮತ್ತು ಮಣ್ಣಿನ ಗೋಡೆ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್‌ ಹಾಳೆ ಹಾಕಲಾಗುತ್ತಿದೆ. ಬಹುತೇಕ ಮನೆಗಳು ಸೋರುತ್ತಿದ್ದು, ಎಲ್ಲರೂ ಪ್ಲಾಸ್ಟಿಕ್‌ ಹಾಳೆಗಳನ್ನು ಗದಗ ನಗರಕ್ಕೆ ಖರೀದಿಸಲು ಹೋಗುತ್ತಿದ್ದಾರೆ. ಇದರ ಲಾಭ ಪಡೆಯಲು ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಛಾವಣೆ ಮುಚ್ಚಲು .5000ಕ್ಕೂ ಹೆಚ್ಚು ಬೆಲೆಯ ಪ್ಲಾಸ್ಟಿಕ್‌ ಹಾಳೆ ತಂದು ರಕ್ಷ ಣೆ ಮಾಡಿಕೊಂಡಿದ್ದಾರೆ.