ಜೋಯಿಡಾ : ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ತಾಲ್ಲೂಕಿನ ಕ್ಯಾಸಲ್ ರಾಕ್ ಸಮೀಪದ ಕರಂಜೋಳ್ ಬಳಿ ಭೂಕುಸಿತವಾಗಿ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದ ಹಿನ್ನಲೆಯಲ್ಲಿ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ನಿನ್ನೆ ರಾತ್ರಿಯಿಂದಲೆ ರೈಲ್ವೆ ಹಳಿ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ತೆರವು ಕಾರ್ಯ ಇಂದು ಬುಧವಾರವೂ ಮುಂದುವರಿದಿದೆ. ರೈಲ್ವೆ ಸಿಬ್ಬಂದಿಗಳು ಮತ್ತು ಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಭೂ ಕುಸಿತದಿಂದಾಗಿ ಸಧ್ಯ ಹುಬ್ಬಳ್ಳಿಯಿಂದ ಗೋವಾಕ್ಕೆ ತೆರಳುವ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿದೆ.