ಕುಮಟಾ : “ಏಕರೂಪ ನಾಗರೀಕ ಕಾಯ್ದೆ ಯಾವುದೇ ಧರ್ಮ ಹಾಗೂ ಯಾವುದೇ ಆಚರಣೆ, ಪದ್ದತಿಗಳಿಗೆ ಸಮಸ್ಯೆ ಮಾಡುವುದಿಲ್ಲ. ಯಾವುದರಲ್ಲೂ ಮೂಗು ತೂರಿಸುವುದಿಲ್ಲ. ನಾಗರೀಕನಾಗಿ ದೇಶದ ಪ್ರತಿಯೊಬ್ಬರೂ ಪಾಲಿಸಬೇಕಾದ ಸಮಾನ ಕಾಯ್ದೆಯನ್ನು ಏಕರೂಪ ನಾಗರೀಕ ಸಂಹಿತೆ ತರುತ್ತಿದೆ..” ಎಂದು ರೋಹಿತ್ ಚಕ್ರತೀರ್ಥ ಹೇಳಿದರು, ಅವರು ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಕುಮಟಾದ ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ನಡೆದ ಮಂಥನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮೆಕಾಲೆ ಪ್ರಣೀತವಾದ ಏಕರೂಪ ಶಿಕ್ಷಣ ತಂದಂತೆ, ಹಿಂದೂ ಮ್ಯಾರೇಜ್ ಆಕ್ಟ್, ದತ್ತು ಸ್ವೀಕಾರ ಆಕ್ಟ್ ಗಳು ಬಂದವು, ಇದೀಗ ಏಕರೂಪ ಕಾನೂನು ಜಾರಿಯಾಗುತ್ತಲಿದೆ. ಆದರೆ ಹಿಂದುಗಳಿಗೆ ಅವರದೇ ವ್ಯವಸ್ಥೆ ಇದೆ. ಆಲ್ ಇಂಡಿಯಾ ಮುಸ್ಲಿಂ ಲೀಗ್ ಎಂಬ ಬೋರ್ಡ ಮುಸಲ್ಮಾನರಿಗೆ ಇದ್ದು, ಅವುಗಳ ಪ್ರಕಾರ ಮುಸಲ್ಮಾನರು ನಡೆದುಕೊಳ್ಳುತ್ತಿದ್ದಾರೆ ಆದರೆ ಎಲ್ಲರನ್ನೂ ಒಳಗೊಂಡ ಒಂದು ದೇಶ ಒಂದು ಕಾನೂನು ಎಂಬ ಕಲ್ಪನೆ ಇಲ್ಲಿದೆ ಎಂದರು.
ಭಾರತದಲ್ಲಿ ಕ್ರಿಮಿನಲ್ ಕಾನೂನು ಎಲ್ಲರಿಗೂ ಒಂದೇ. ಐಪಿಸಿ ಹಾಗೂ ಸಿಆರ್‌ಪಿಸಿ ಸೆಕ್ಷನ್‌ಗಳಲ್ಲಿ ಯಾವುದೇ ಧರ್ಮಾಧಾರಿತ ಕಾನೂನು ಇಲ್ಲ. ಕೊಲೆ, ಕಳ್ಳತನ, ದರೋಡೆ, ಮೋಸ ಸೇರಿದಂತೆ ಯಾವುದೇ ರೀತಿಯ ಅಪರಾಧ ಎಸಗಿದರೂ ಜಾತಿ, ಧರ್ಮ ನೋಡದೆ ಒಂದೇ ರೀತಿಯ ಕಾನೂನು ಅನ್ವಯ ಆಗುತ್ತದೆ, ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಮದುವೆ, ವಿಚ್ಛೇದನ, ದತ್ತು ಪ್ರಕ್ರಿಯೆ, ಆಸ್ತಿ ಹಂಚಿಕೆ ವಿಚಾರಕ್ಕೆ ಬಂದರೆ ಧರ್ಮಾಧಾರಿತ ಕಾನೂನುಗಳಿವೆ. ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾಯ್ದೆ ಹೀಗೆ ಧರ್ಮಾಧಾರಿತವಾಗಿ ಕಾಯ್ದೆ ಕಾನೂನುಗಳಿವೆ. ಈ ರೀತಿಯ ಕಾನೂನುಗಳಿಂದಾಗಿ ದೇಶದ ಎಲ್ಲ ಜನರೂ ಮುಕ್ತವಾಗಿ ಬೆರೆಯಲು ಸಾಧ್ಯ ಆಗುತ್ತಿಲ್ಲ ಎಂಬುದನ್ನು ಗಮನಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುತ್ತಾ, ಮಾತನಾಡಿದ ಚಕ್ರತೀರ್ಥ ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಯಾವುದೇ ಉಲ್ಲೇಖ ಈ ಕಾಯ್ದೆಯಲ್ಲಿ ಇಲ್ಲ. ಎಲ್ಲಾ ಧರ್ಮದ ಕಾನೂನುಗಳನ್ನೂ ಗಮನಿಸಿ, ಎಲ್ಲಾ ಒಳಿತನ್ನು ತೆಗೆದುಕೊಂಡು ಒಂದು ಕಾಯ್ದೆ ರೂಪಿಸಲಾಗಿದೆ ಎಂದು ತಿಳಿಸಿದರು. ಆದರೆ ಈ ಕಾಯ್ದೆಯನ್ನು ರಾಜ್ಯದವರು ಅನುಷ್ಠಾನಕ್ಕೆ ತರಬಹುದು ಅಥವಾ ಭಾಗಶಃ ತರುವುದು, ತರದಿರುವುದಕ್ಕೆ ಸ್ವತಂತ್ರ ಅವಕಾಶ ಇರಲಿದೆ ಎಂದು ಅವರು ವಿವರಿಸಿದರು.
ಜನಸಂಖ್ಯೆ ನಿಯಂತ್ರಣ, ಹಿಂದುಗಳ ಸಂಪ್ರದಾಯದ ಮೇಲೆ ಹೇರಿಕೆಯ ವಿಚಾರ, ಸಾಮಾಜಿಕ ಸಂಘರ್ಷದ ಬಗ್ಗೆ ಸಾರ್ವಜನಿಕರು ತಮ್ಮ ಪ್ರಶ್ನೆಗಳನ್ನು ಎತ್ತಿದರು. ಜನಸಂಖ್ಯೆಯ ಆಧಾರದಲ್ಲಿಯೇ ಎಲ್ಲವೂ ನಿರ್ಧಾರವಾಗುತ್ತಿದೆ. ಚುನಾವಣೆಯೂ ಅದೇ ಆಗಿದೆ. ಹಿಂದುಗಳೆಂದು ಹೇಳುವ ಹಲವರು ಸಾಂಘಿಕವಾಗಿ, ಒಟ್ಟಾಗಿ ಯಾವುದೇ ವಿಷಯವನ್ನು ಹೇಳದಿದ್ದರೂ ಅವನತಿ ಖಂಡಿತ ಹೀಗಾಗಿ ಒಕ್ಕೊರಲಿನಿಂದ ಈ ಅಂಶವನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು. 20% ಇರುವ ಅಲ್ಪಸಂಖ್ಯಾತರು ಸಂಘಟಿತರಾಗಿ ತಮ್ಮ ಅಭಿಪ್ರಾಯ ದಾಖಲಿಸುತ್ತಾರೆ. ಹಾಗಾಗಿ ಅವರು ಗೆಲ್ಲುತ್ತಾರೆ ಎಂದರು.
ಕಲ್ಪತರು ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಹನುಮಂತ ಶಾನಭಾಗ ವೇದಿಕೆಯಲ್ಲಿದ್ದರು.