ದಾಂಡೇಲಿ: ಮಣಿಪುರ ರಾಜ್ಯದಲ್ಲಿ ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದನ್ನು ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿ, ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಾರ್ಯಲಯದ ಮುಂಭಾಗದಲ್ಲಿ ಆಹಾರ ನಿರೀಕ್ಷಕರಾದ ಗೋಪಿ ಚೌವ್ಹಾಣ್ ಅವರ ಮೂಲಕ ಸೋಮವಾರ ಸಲ್ಲಿಸಿತು.
ಮಣಿಪುರದಲ್ಲಿ ಇತ್ತಿಚೀಗೆ ಜನಾಂಗಿಯ ಗಲಭೆಯಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಗಲಭೆಕೊರರ ಗುಂಪು ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿತ್ತಲ್ಲದೇ, ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಟ್ಟಹಾಸ ಮರೆದಿದ್ದಾರೆ. ಈ ಹೇಯ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ, ನೀಚ ಕೃತ್ಯ ಎಸಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಿಬೇಕೆಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾನವ ಹಕ್ಕು ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಫಿರೋಜ್ ಫಿರಜಾದೆ, ಉಪಾಧ್ಯಕ್ಷ ರಾಘವೇಂದ್ರ ಗಡೆಪ್ಪನವರ್, ಸಂಘಟನೆಯ ಪ್ರಮುಖರುಗಳಾದ ಬಲವಂತ ಬೊಮ್ಮನಹಳ್ಳಿ, ಮಂಜುಳಾ ಕಾಂಬಳೆ, ಸಂಗೀತಾ ಆಮ್ರೆ, ಪ್ರಭಾವತಿ ನಾಯ್ಕ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.