ಭೋಪಾಲ್ ಜುಲೈ 25: ಮಧ್ಯಪ್ರದೇಶದ ಕಟ್ನಿಯಲ್ಲಿ ಕಂದಾಯ ಇಲಾಖೆಯ ಪಟ್ವಾರಿ (ಕಡತಗಳ ದಾಖಲೆ ಇಟ್ಟುಕೊಳ್ಳುವವರು) ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ವಿಶೇಷ ಪೊಲೀಸ್ ತಂಡ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ವೇಳೆ ಸಾಕ್ಷ್ಯ ನಾಶಪಡಿಸಲು ಈ ವ್ಯಕ್ತಿ ಲಂಚವಾಗಿ ತೆಗೆದುಕೊಂಡ ಹಣವನ್ನು ನುಂಗಿರುವ ಘಟನೆ ಸೋಮವಾರ ನಡೆದಿದೆ.
ಪಟ್ವಾರಿ ಗಜೇಂದ್ರ ಸಿಂಗ್ ಅವರು ತಮ್ಮ ಖಾಸಗಿ ಕಚೇರಿಯಲ್ಲಿ 4,500 ರೂಪಾಯಿಗಳನ್ನು ಲಂಚವಾಗಿ ಸ್ವೀಕರಿಸುತ್ತಿರುವಾಗ ಎಸ್‌ಪಿಇಯ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ತಂಡವು ಅವರನ್ನು ಕಚೇರಿಯಿಂದ ಹೊರಗೆ ಕರೆದೊಯ್ಯುವಾಗ ಸಿಂಗ್ ಬ್ಯಾಂಕ್ ನೋಟುಗಳನ್ನು ಜಗಿದು ನುಂಗಿದ್ದಾರೆ.
ಸಿಂಗ್ ಹಣವನ್ನು ನುಂಗಿದ ನಂತರ, ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಸಹಾಯದಿಂದ ಸಾಕ್ಷ್ಯವನ್ನು ಸಂಗ್ರಹಿಸಿದರು.
ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಸಿಂಗ್ ಲಂಚ ಕೇಳುತ್ತಿದ್ದಾರೆ ಎಂದು ನಮಗೆ ದೂರು ನೀಡಿದ್ದರು. ಹಣವನ್ನು ಸ್ವೀಕರಿಸಿದ ಪಟ್ವಾರಿ ಎಸ್‌ಪಿಇ ತಂಡವನ್ನು ಕಂಡೊಡನೇ ಹಣವನ್ನು ನುಂಗಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.