ದಾಂಡೇಲಿಯ ಬರ್ಚಿ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಬಿದ್ದು ಸಾವು

ದಾಂಡೇಲಿ : ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ದುರ್ಘಟನೆ ನಗರದ ಬರ್ಚಿ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಹತ್ತಿರ ಸೋಮವಾರ ನಡೆದಿದೆ.

ನಗರದ ಬಂಗೂರನಗರದ ವೈ ಟೈಪ್ ನಿವಾಸಿ, 61 ವರ್ಷ ವಯಸ್ಸಿನ ಪ್ರಭಾವತಿ ರಾಂಬಾಬು ಶರ್ಮಾ ಎಂಬವರೇ ಮೃತಪಟ್ಟ ದುರ್ದೈವಿ. ಇವರು ತನ್ನ ಮಗ ಮಾಯಾಂಕ್ ಶರ್ಮಾ ಅವರ ಜೊತೆ ಕೆಎ : 31, ಯು: 4397 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಕುಳಗಿ ರಸ್ತೆಯಲ್ಲಿರುವ ಶಿವಮಂದಿರಕ್ಕೆ ಹೋಗುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಕೊಡೆ ಒಮ್ಮೆಲೆ ಗಾಳಿಗೆ ಬಲವಾಗಿ ಎಳೆದಂತೆ ಆಗಿದೆ. ಈ ಸಮಯದಲ್ಲಿ ಪ್ರಭಾವತಿ ರಾಂಬಾಬು ಶರ್ಮಾ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಪ್ರಭಾವತಿ ರಾಂಬಾಬು ಶರ್ಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೂಡಲೇ ಆಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.