ದಾಂಡೇಲಿ : ಹಿಂಬದಿ ಮನೆಯವರು ಇತ್ತೀಚಿನ ಕೆಲವು ತಿಂಗಳ ಹಿಂದೆ ನಿರ್ಮಿಸಿಕೊಂಡಿದ್ದ ಆವರಣ ಗೋಡೆಯೊಂದು ಬಿದ್ದು ನಾಲ್ಕು ಮನೆಗಳಿಗೆ ತೀವ್ರ ಹಾನಿಯಾದ ಘಟನೆ ದಾಂಡೇಲಿ ನಗರದ ಮಿರಾಶಿ ಗಲ್ಲಿಯಲ್ಲಿ ನಡೆದಿದೆ.
ಮಿರಾಶಿ ಗಲ್ಲಿಯ ನಿವಾಸಿಗಳಾದ ಅಲ್ಲಾಭಕ್ಷು ಕಾಶಿನಟ್ಟಿ, ಮಹಾಂತೇಶ ನಾಗನೂರ, ಅಬ್ದುಲ್ ಸತ್ತಾರ್ ಧಾರವಾಡಕರ್ ಮತ್ತು ಶ್ರೀಕಾಂತ ನಾಯ್ಕ ಎಂಬವರ ಒಟ್ಟು ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಈ ಮನೆಗಳ ಹಿಂಬ್ಯಲ್ಲಿ ಗಟಾರ ದಾಟಿ ಇರುವ ಮನೆಯವರು ಬೃಹತ್ ಪ್ರಮಾಣದ ಆವರಣ ಗೋಡೆಯನ್ನು ಇತ್ತೀಚಿನ ತಿಂಗಳಲ್ಲಿ ನಿರ್ಮಿಸಿದ್ದರು. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಹಾಗೂ ತಾಂತ್ರಿಕ ರೂಪುರೇಷೆಯಿಲ್ಲದೆ ಆವರಣ ಗೋಡೆ ನಿರ್ಮಿಸಿರುವುದರಿಂದ ಒಮ್ಮಿಂದೊಮ್ಮೆಗೆ ಆವರಣ ಗೋಡೆ ಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ನಾಲ್ಕು ಮನೆಗಳ ಹಿಂಬದಿ ಗೋಡೆ, ಅಡುಗೆ ಮನೆ, ಶೌಚಾಲಯ ಮತ್ತು ಸ್ನಾನದ ಕೊಠಡಿಗಳೆಲ್ಲವೂ ಆವರಣ ಗೋಡೆ ಬಿದ್ದ ರಭಸಕ್ಕೆ ಜಕಂಗೊಂಡಿದೆ.
ಆವರಣ ಗೋಡೆ ಬೀಳುತ್ತಿರುವಾಗ ಶ್ರೀಕಾಂತ ನಾಯ್ಕ ಅವರ ಮನೆಯ ಅಡುಗೆ ಕೋಣೆಯಲ್ಲಿದ್ದ ಅವರ ಮಗ ಹೆದರಿ ಓಡಿ ಬಂದು ಬಿದ್ದು ತಕ್ಕ ಮಟ್ಟಿಗೆ ಗಾಯ ಮಾಡಿಕೊಂಡಿದ್ದಾನೆ. ಈ ನಾಲ್ಕು ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ.
ಸ್ಥಳಕ್ಕೆ ಸ್ಥಳೀಯ ನಗರ ಸಭಾ ಸದಸ್ಯರಾದ ರೋಶನಜಿತ್ ಅವರು ಭೇಟಿ ನೀಡಿ, ತಕ್ಷಣವೆ ನಗರ ಸಭೆ ಮತ್ತು ತಾಲ್ಲೂಕಾಡಳಿತಕ್ಕೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪೌರಾಯುಕ್ತರಾದ ಆರ್.ಎಸ್.ಪವಾರ್, ನಗರ ಸಭೆಯ ಸಹಾಯಕ ಅಭಿಯಂತರರಾದ ವಿ.ಎಸ್.ಕುಲಕರ್ಣಿ, ನಗರ ಸಭೆಯ ಕಂದಾಯ ನಿರೀಕ್ಷಕ ಬಾಳು ಗವಸ, ಆರೋಗ್ಯ ನಿರೀಕ್ಷಕ ವಿಲಾಸ್ ದೇವಕರ್ ಮೊದಲಾದವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಆವರಣ ಗೋಡೆಯನ್ನು ನಿರ್ಮಿಸಿರುವ ಹಿಂಬದಿ ಮನೆಯ ಮಾಲಕರಾದ ಗಣಪತಿ ನಾಯ್ಕ ಅವರ ಜೊತೆ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತರ ಮಾತಿಗೆ ಗೌರವವನ್ನು ನೀಡಿದ ಗಣಪತಿ ನಾಯ್ಕ ಅವರು ಇದು ಉದ್ದೇಶಪೂರ್ವಕವಾಗಿ ಆದ ಘಟನೆಯಲ್ಲ. ಆದಾಗ್ಯೂ ಆವರಣ ಗೋಡೆ ನಾವು ನಿರ್ಮಿಸಿರುವುದರಿಂದ, ನಮ್ಮದೇ ಆವರಣ ಗೋಡೆ ಮನೆಗಳ ಮೇಲೆ ಬಿದ್ದಿರುವುದರಿಂದ ಆ 4 ಮನೆಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾನಿಗೊಳಗಾದ 4 ಮನೆಗಳನ್ನು ದುರಸ್ತಿ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದರು