ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

ಢಾಕಾ: ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾ ಜಿಲ್ಲೆಯಲ್ಲಿ ಹಿಂದೂ ದೇಗುಲವನ್ನು ಧ್ವಂಸಗೊಳಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಖಲೀಲ್ ಮಿಯಾ(36) ಎಂದು ಗುರುತಿಸಲಾಗಿದೆ. ಈತ ನಿಯಾಮತ್‍ಪುರ ಗ್ರಾಮದಲ್ಲಿರುವ ನಿಯಾಮತ್ ಪುರ್ ದುರ್ಗಾ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾನೆ.

ದೇಗುಲ ಧ್ವಂಸದ ವಿಚಾರ ಕೂಡಲೇ ಭಾರೀ ಸುದ್ದಿಯಾಯಿತು. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಜನ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಬ್ರಾಹ್ಮಣಬಾರಿಯಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶೆಖಾವತ್ ಹುಸೈನ್ ಪ್ರತಿಕ್ರಿಯಿಸಿ, ಬಂಧಿತನ ಕೃತ್ಯದ ಹಿಂದಿನ ಉದ್ದೇಶವೇನು..? ಅಲ್ಲದೆ ಈ ಕೃತ್ಯದ ಹಿಂದೆ ಯಾರದ್ದಾರೆ ಎಂಬುದರ ಬಗ್ಗೆ ತಣಿಕೆ ನಡೆಸುವುದಾಗಿ ತಿಳಿಸಿದ್ದಾರೆ.

ನಿಯಾಮತ್‍ಪುರ ಗ್ರಾಮದ ತನ್ನ ಸಹೋದರಿಯ ಮನೆಗೆ ಬಂದಿದ್ದ ವೇಳೆ ಖಲೀಲ್ ಈ ಕೃತ ಎಸಗಿದ್ದಾನೆ. ಸ್ಥಳೀಯ ನಿವಾಸಿಗಳ ಸಣ್ಣ ಜಗಳ ಉಲ್ಬಣಗೊಂಡು ದುರ್ಗಾ ದೇವಸ್ಥಾನದೊಳಗಿನ ಐದರಿಂದ ಆರು ವಿಗ್ರಹಗಳನ್ನು ಧ್ವಂಸ ಮಾಡಲು ಕಾರಣವಾಯಿತು ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.

ಜಗದೀಶ್ ದಾಸ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ತ್ವರಿತ ವಿಚಾರಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.