ಮೋದಿ ಜೀ, ಯೋಗಿ ಜೀ ನನ್ನನ್ನ ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸಬೇಡಿ – ಸೀಮಾ ಹೈದರ್‌ ಮನವಿ

ಲಕ್ನೋ: ಪಬ್‌ಜೀ ಪ್ರೇಮಿಗಾಗಿ ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪ್ರಕರಣದಲ್ಲಿ ದಿನ್ನಕ್ಕೊಂದು ರಹಸ್ಯ ಬಯಲಾಗುತ್ತಿದೆ.

ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನೊಂದಿಗೆ ಆಕೆ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆ ATS ಹಾಗೂ ಇಂಟೆಲಿಜೆನ್ಸ್ ಬ್ಯೂರೋ (IB) ವಿಚಾರಣೆ ನಡೆಸಿದ ನಂತರ ನಾನು ಗೂಢಚಾರಿಯಲ್ಲ, ನನ್ನನ್ನು ಪಾಕಿಸ್ತಾನಕ್ಕೆ ವಾಪಸ್‌ ಕಳುಹಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ ಮಾಡಿಕೊಂಡಿದ್ದಾಳೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೀಮಾ ನಾನು ಭಾರತಕ್ಕೆ ಹೋಗುತ್ತಿದ್ದೇನೆ ಅನ್ನೋದು ಪಾಕಿಸ್ತಾನದಲ್ಲಿ ಯಾರಿಗಾದರೂ ತಿಳಿದಿದ್ದರೆ ಅಲ್ಲಿಯೇ ನನ್ನನ್ನ ಕೊಂದುಬಿಡುತ್ತಿದ್ದರು. ನಾನು ಗೂಢಚಾರಿಯಲ್ಲ. ಶೀಘ್ರವೇ ಸತ್ಯವೇನೆಂಬುದು ಹೊರಬರಲಿದೆ. ನನ್ನನ್ನ ವಾಪಸ್‌ ಕಳುಹಿಸದಂತೆ ನಾನು ಮೋದಿ ಜೀ, ಯೋಗಿ ಜೀ ಅವರಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾಳೆ.

6 ಗಂಟೆಗಳ ಕಾಲ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗೆ ಒಳಗಾಗಿದ್ದ ಸೀಮಾ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನನಗೆ ಬೇರೆ ಆಯ್ಕೆಗಳು ಇರಲಿಲ್ಲ. ಆದ್ದರಿಂದ ಭಾರತಕ್ಕೆ ಅಕ್ರಮವಾಗಿಯೇ ಪ್ರವೇಶಿಸಬೇಕಾಯ್ತು. ನನಗೆ ಪಾಕಿಸ್ತಾನದಲ್ಲಿ ವಾಸಿಸಲು ಇಷ್ಟವಿರಲಿಲ್ಲ. ನಾನು ಹಿಂದಿನ ನನ್ನ ಯಾವುದೇ ಮಾಹಿತಿಯನ್ನೂ ಮರೆಮಾಚಿಲ್ಲ ಎಂದು ಸೀಮಾ ವಿಚಾರಣೆಯಲ್ಲಿ ತಿಳಿಸಿದ್ದಾಳೆ.

30 ವರ್ಷದ ಸೀಮಾಗೆ ಆನ್‌ಲೈನ್ ಗೇಮ್ ಪಬ್ಜಿ ಮೂಲಕ ಭಾರತದ ನಿವಾಸಿ ಸಚಿನ್ ಪರಿಚಯವಾಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿದ್ದು, ಆತನೊಂದಿಗೆ ಜೀವಿಸುವ ಸಲುವಾಗಿ ತನ್ನ 4 ಮಕ್ಕಳೊಂದಿಗೆ ಮೇ ತಿಂಗಳಿನಲ್ಲಿ ನೇಪಾಳದ ಮೂಲಕ ಬಸ್‌ನಲ್ಲಿ ಭಾರತ ಪ್ರವೇಶಿಸಿದ್ದಳು. ಕಳೆದ 2 ತಿಂಗಳಿನಿಂದ ಆಕೆ ತನ್ನ ಗೆಳೆಯ ಸಚಿನ್ ಮೀನ ಜೊತೆಗೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಳು.

ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನೊಂದಿಗೆ ಆಕೆಗೆ ಸಂಬಂಧದ ಶಂಕೆಯ ಹಿನ್ನೆಲೆ ಎಟಿಎಸ್ ಹಾಗೂ ಇಂಟೆಲಿಜೆನ್ಸ್ ಬ್ಯೂರೋ ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ ಸೀಮಾ ಹೈದರ್‌ನ ಈ ಹಿಂದೆ ಡಿಲೀಟ್ ಆಗಿರುವ ಮೊಬೈಲ್ ಡೇಟಾವನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಕೆಯ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಸಹ ತನಿಖೆಗೆ ಒಳಪಡಿಸಲಾಗಿದೆ.