ಯಲ್ಲಾಪುರ :ಶುಕ್ರವಾರವೂ ಮುಂದುವರೆದ ಮಳೆ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ 4-5 ದಿವಸಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ. ಶುಕ್ರವಾರ 97.6 ಮಿಮೀ ಮಳೆಯಾಗಿದ್ದು, ಈವರೆಗೆ 968.8 ಮಿಮೀ ಮಳೆಯಾಗಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಮುಂದುವರಿದಿದ್ದು, ದಿನದಲ್ಲಿ ಒಂದು ತಾಸು ಸಹ ವಿದ್ಯುತ್ ಇಲ್ಲದೇ ಗ್ರಾಮೀಣ ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಮಳೆಗಾಲಕ್ಕೂ ಮುನ್ನ ವಾರಕ್ಕೆ ಒಂದು, ಎರಡು ದಿವಸ ಮಳೆಗಾಲದ ಪೂರ್ವಸಿದ್ಧತೆ ಎಂದು ವಿದ್ಯುತ್ ವ್ಯತ್ಯಯ ಮಾಡಿದ್ದ ಇಲಾಖೆ, ಮಳೆಗಾಲದಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉಚಿತ ವಿದ್ಯುತ್ ಭಾಗ್ಯ ಎಂಬುದು ಕೇವಲ ನೆಪಮಾತ್ರಕ್ಕೆ ಎಂಬಂತಾಗಿದ್ದು, ಕತ್ತಲೆ ಭಾಗ್ಯವೇ ಖಾಯಂ ಆಗಿದೆ.

ರಸ್ತೆಯ ಮೇಲೆ ನೀರು:
ಅಸಮರ್ಪಕ ಸಿಡಿ ವ್ಯವಸ್ಥೆಯಿಂದಾಗಿ ತಾಲೂಕಿನ ಮಾಗೋಡ ರಸ್ತೆಯಲ್ಲಿ ಕಾಳಿಮನೆ ಕ್ರಾಸ್ ಬಳಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನೀರು ಹರಿದು ಹೋಗಲು ಸ್ಥಳವಿಲ್ಲದೇ ರಸ್ತೆಯ ಮೇಲೆ ನೀರು ತುಂಬಿ ನಿಲ್ಲುವಂತಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಾಗಿದೆ.
ಮಾಗೋಡ ಜಲಪಾತ, ಜೇನುಕಲ್ಲುಗುಡ್ಡ, ಚಂದಗುಳಿ ಘಂಟೆ ಗಣಪತಿ ದೇವಸ್ಥಾನ, ಕವಡಿಕೆರೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ದೂರ ದೂರದ ಊರುಗಳಿಂದ ಪ್ರವಾಸಿಗರು ಬರುತ್ತಿದ್ದು, ಈ ಅವ್ಯವಸ್ಥೆಯ ಬಗ್ಗೆ ಶಪಿಸುತ್ತ ಹೋಗುವಂತಾಗಿದೆ. ಕಳೆದ 5-6 ವರ್ಷಗಳಿಂದ ಈ ಸಮಸ್ಯೆ ಇದ್ದರೂ, ಸಂಬಂಧಪಟ್ಟವರು ಇದನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.