ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಟೋ ಡ್ರೈವರ್ ಆದ ಮಂಗಳಮುಖಿ

ಉಡುಪಿ, ಜುಲೈ 21: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ನಿವಾಸಿಯಾಗಿರುವ ಕಾವೇರಿ ಮೇರಿ ಡಿಜೋಜಾ ಅವರು ತಾನು ಮಂಗಳಮುಖಿಯಾದರೇನು ತನಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅರಿತು ಮೇತ್ರಿ ಪಟ್ಟಣದಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ. ಇದರ ಜೊತೆಗೆ ನಮ್ಮದೇ ಆದ ಸಾರ್ಥಕ ಜೀವನ ನಡೆಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

ಎಚ್‌ಐವಿ ರೋಗಿಗಳಿಗೆ ಸಹಾಯಕಿಯಾಗಿ ಸೇವೆ ಸಲ್ಲಿಸಿದ ನಂತರ ಕಾವೇರಿ ಅವರು ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಈ ರೀತಿಯಾಗಿ ಮುಂದುವರಿಯಲು ಇಚ್ಚಿಸದ ಕಾವೇರಿ ವ್ಯಾಪಾರದ ಅದೃಷ್ಟದ ಪರೀಕ್ಷೆಗೆ ಇಳಿದರು. ಅದರಂತೆ, ಪೇತ್ರಿ ಪಟ್ಟಣದಲ್ಲಿ ಆಟೋ ಓಡಿಲು ನಿರ್ಧರಿಸಿದರು. ಇದಕ್ಕಾಗಿ 1.8 ಲಕ್ಷ ರೂಪಾಯಿ ಸಾಲ ಪಡೆದು ಆಟೋ ಖರೀದಿಸಿದರು.

ಆಟೋ ಓಡಿಸುತ್ತಲೇ ಸಾಲದ ಕಂತು ಕಟ್ಟುತ್ತಿದ್ದ ಕಾವೇರಿ ಅವರ ನೆರವಿಗೆ ದಾವಿಸಿದ ಹ್ಯೂಮಾನಿಟಿ ಟ್ರಸ್ಟ್ ಬೆಳ್ಮನ್, 1.7 ಲಕ್ಷ ರೂ. ಪಾವತಿಸುವ ಮೂಲಕ ಬ್ಯಾಂಕ್ ಸಾಲವನ್ನು ಸಂದಿಸಿದೆ. ಈ ಬಗ್ಗೆ ಟೈಮ್ಸ್​ ಆಫ್ ಇಂಡಿಯಾ ಜೊತೆ ಮಾತನಾಡಿದ ಟ್ರಸ್ಟ್​ನ ಸಂಸ್ಥಾಪಕ ರೋಶನ್ ಬೆಳ್ಮನ್, ನಾವು ಕಾವೇರಿ ಅವರ ಮನೆ ನಿರ್ಮಾಣದ 10 ವರ್ಷಗಳ ಕನಸನ್ನು ಈಡೇರಿಸುವ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

“ರಾಜ್ಯದ ಮೊದಲ ಟ್ರಾನ್ಸ್‌ಜೆಂಡರ್ ಆಟೊರಿಕ್ಷಾ ಚಾಲಕ ನಾನೇ. ಬಹಳ ಹಿಂದೆಯೇ ಆಟೋ ಓಡಿಸಲು ಕಲಿತಿದ್ದರೂ ಗುರುತಿನ ಪುರಾವೆ ಇಲ್ಲದ ಕಾರಣ ಲೈಸನ್ಸ್ ಪಡೆಯಲು ಸಾಧ್ಯವಾಗಿರಲಿಲ್ಲ. ಕಳೆದ 6 ತಿಂಗಳ ಹಿಂದೆ ಲೈಸನ್ಸ್ ಪಡೆದಿದ್ದೇನೆ. ಮಂಗಳಮುಖಿಯಾಗಿದ್ದರೂ ಸ್ವಾಭಿಮಾನದ ಜೀವನವನ್ನು ನಡೆಸುವುದು ಮತ್ತು ಮುಖ್ಯವಾಹಿನಿಯ ಸಮಾಜದ ಭಾಗವಾಗುವುದು ನನ್ನ ಗುರಿಯಾಗಿದೆ” ಕಾವೇರಿ ಹೇಳಿದ್ದಾಗಿ ವರದಿ ಮಾಡಿದೆ.