ಧಾರೇಶ್ವರ ಶಾಲಾ ಮಕ್ಕಳಿಗೊಂದು ಕೃಷಿ ಪ್ರಾತ್ಯಕ್ಷಿಕೆ : ನಾಟಿ ಮಾಡಿ ಗಮನ ಸೆಳೆದ ಮಕ್ಕಳು

ಕುಮಟಾ : ತಾಲೂಕಿನ ಧಾರೇಶ್ವರದ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಗದ್ದೆಗಿಳಿದು, ಕೃಷಿ ಕ್ಷೇತ್ರದ ಪರಿಚಯವನ್ನು ಮಾಡಿಕೊಳ್ಳುವ ಜೊತಗೆ ಕೃಷಿಯ ಮಹತ್ವ , ಕೃಷಿ ಪದ್ಧತಿಗಳ ವಿಶೇಷವಾದ ಜ್ಞಾನವನ್ನು ಪಡೆದರು.

ಶಾಲೆಯಲ್ಲಿ ಪೆನ್ನು ಹಿಡಿದು ಓದಿ ಬರೆಯುತ್ತಿದ್ದ ಪುಟ್ಟ ಕೈಗಳು ಪಟಪಟನೆ ಭತ್ತದ ಸಸಿಗಳನ್ನು ಕಿತ್ತು, ನೋಡು ನೋಡುತ್ತಿದ್ದಂತೆಯೇ ನಾಟಿ ಕಾರ್ಯ ಮಾಡಿದ್ದು ನುರಿತ ಕೃಷಿ ಕೆಲಸದವರನ್ನೂ ನಾಚಿಸುವಂತಿತ್ತು.

ಪಠ್ಯದಲ್ಲಿರುವ ಕೃಷಿ ಚಟುವಟಿಕೆ ಪಾಠ ಮಾಡಬೇಕಿದ್ದ ಶಿಕ್ಷಕರು ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದ್ದೂ ಸಹ ಮೆಚ್ಚುಗೆಗೆ ಪಾತ್ರವಾಗಿದೆ.
ಶ್ವೇತಾ ನಾಯ್ಕ, ಟೀನಾ, ಜಯಾ ಇತರ ಶಿಕ್ಷಕರು ಈ ಕಾರ್ಯದಲ್ಲಿ ಭಾಗಿಗಳಾಗಿ ಗಮನ ಸೆಳೆದರು.

ಇಲ್ಲಿನ ರಾಮಚಂದ್ರ ನಾಯ್ಕ ಹಾಗೂ ರವಿ ನಾಯ್ಕ ರವರ ಜಮೀನಿಗೆ ತೆರಳಿದ ಮಕ್ಕಳಿಗೆ ಕೃಷಿಕರು ತಮ್ಮ ಅನುಭವದ ಪಾಠವನ್ನು ತಿಳಿಹೇಳಿದರು. ವಿದ್ಯಾರ್ಥಿಗಳು ಹೊಸ ಅನುಭವವನ್ನು ಪಡೆದುಕೊಂಡು ತುಂಬಾ ಸಂತಸದಿಂದ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಇದರ ಕುರಿತು ಪ್ರತಿಕ್ರಿಯಿಸಿದ ಮುಖ್ಯೋಪಾದ್ಯಾಯರಾದ ಜಗದೀಶದ ಗುನಗಾ, ” ದಿನಕರ ದೇಸಾಯಿಯವರ ಆಸೆಯಂತೆ ಹಳ್ಳಿಯ ಪ್ರತೀ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದ ಪ್ರತೀಕವಾಗಿ ಈ ಕಾರ್ಯ ಮಾಡಿದ್ದೇವೆ. ವಿದ್ಯಾರ್ಥಿಗಳ ಉತ್ಸಾಹ ಕಂಡು ನಾವುಗಳೂ ಸ್ಪೂರ್ತಿ ಪಡೆದೆವು. ತರಗತಿಯ ಕೋಣೆಯೊಳಗಿನ ಪಾಠಕ್ಕಿಂತ ಇದು ನೈಜತೆ ತುಂಬುತ್ತದೆ. ಪ್ರತೀ ವರ್ಷ ಇಂತಹ ಚಟುವಟಿಕೆ ಸಂಯೋಜಿಸುತ್ತೇವೆ..” ಎಂದರು.
ಅದೇ ರೀತಿ “ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ನೆಲದ ಮಹಿಮೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಅಗತ್ಯ. ಪಟ್ಟಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ಅಕ್ಕಿಯನ್ನು ಹೇಗೆ ತಯಾರಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಹ ಸ್ಥಿತಿ ಇದೆ. ಈ ನಡುವೆ ಬಹುತೇಕ ಯುವಕರು ಕೃಷಿ ಚಟುವಟಿಕೆಯಿಂದ ದೂರ ಸರಿದು, ನಗರ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡು ನೆಲೆಸುತ್ತಿದ್ದಾರೆ. ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲಿ ಇಂತಹ ಕೃಷಿ ಪಾಠ ಬದುಕಿನ ನೈಜತೆ ತಿಳಿಸುತ್ತದೆ..” ಎಂದು ಜಮೀನು ಮಾಲಿಕ ರಾಮಚಂದ್ರ ನಾಯ್ಕ ಅಭಿಪ್ರಾಯ ಪಟ್ಟರು.

ಹಾಗೆಯೇ ಮಕ್ಕಳೂ ಸಹ ಅತೀ ಉತ್ಸಾಹದಲ್ಲಿ ಪಾಲ್ಗೊಂಡಿದ್ದಲ್ಲದೇ, ಮಾನ್ಯಶ್ರೀ ಎಂಬ ವಿದ್ಯಾರ್ಥಿನಿಯೊಬ್ಬಳು “ನಮಗೆ ಪ್ರತೀ ವರ್ಷ ಇಂತಹ ಪ್ರಾತ್ಯಕ್ಷಿಕೆ ಅಗತ್ಯ. ಇದರಿಂದ ರೈತರ ಕಷ್ಟ ಸುಖಗಳ ಅರಿವಾಗುವ ಜೊತೆಗೆ, ಕೃಷಿಯ ಮಹತ್ವದ ಅರಿವೂ ಆಗುತ್ತದೆ..” ಎಂದು ಉತ್ಸಾಹದಲಿ ಹೇಳುತ್ತಿದ್ದರೆ, ಭಾರತದ ಬದಲಾವಣೆಗೆ ಇದು ನಾಂದಿಯೇನೋ ಎಂಬಂತಿತ್ತು..