ದಾಂಡೇಲಿ: ನಗರ ಸಭೆಯ ವ್ಯಾಪ್ತಿಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ 4 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಹೇಳಿದರು.
ಅವರು ನಗರ ಸಭೆಯಲ್ಲಿ ಗುರುವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಸಾರ್ವಜನಿಕರು ತಮ್ಮ ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಬರುವ ಎಸ್.ಎಂ.ಎಸ್ (ಸಂದೇಶ) ಆಧರಿಸಿ ಆಯಾ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಕೊಳ್ಳಲು ಮತ್ತು ನೋಂದಣಿಗೆ ಬೇಕಾಗುವ ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡಿನಲ್ಲಿ ದಾಖಲಿರುವ ಮೊಬೈಲ್ ಸೆಟ್ನೊಂದಿಗೆ ಬಂದು ದಾಖಲಾತಿಯನ್ನು ಮಾಡಿಕೊಳ್ಳಬೇಕೆಂದು ಮಾಹಿತಿ ನೀಡಿದ ಆರ್.ಎಸ್.ಪವಾರ್ ಅವರು ನಗರದ ಟೌನಶಿಪ್ನಲ್ಲಿರುವ ಅಂಬೇಡ್ಕರ್ ಭವನ, ಮಾರುತಿನಗರದಲ್ಲಿರುವ ಸಮುದಾಯ ಭವನ, ಹಳೆದಾಂಡೇಲಿಯ ಕನ್ನಡ ಶಾಲೆ ಮತ್ತು ಸುಭಾಸನಗರದ ಪೊಲೀಸ್ ಠಾಣೆ ಎದುರಿಗಿರುವ ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.