ಕಾರವಾರ: ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಇದೀಗ ಬಸ್ಸುಗಳು ಹಾಗೂ ಸಿಂಗಲ್ ಎಕ್ಸೆಲ್ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು ಭಾರೀ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿಲ್ಲ.
ಜಿಲ್ಲೆಯ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69ರ 39.8 ಕಿ.ಮೀ ಪ್ರದೇಶದಲ್ಲಿ ಭಾರಿ ಮಳೆಯಿಂದ ಭೂಕುಸಿತ ಆಗಿರುವುದರಿಂದ ಸಾರ್ವಜನಿಕರ ಜೀವರಕ್ಷಣೆಯ ಹೀತದೃಷ್ಟಿಯಿಂದ ಹೆದ್ದಾರಿಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಜು.22 ರಂದು ರಸ್ತೆಯನ್ನು ಲಘು ವಾಹನಗಳ ಸಂಚಾರಕ್ಕೆ ತೆರೆಯಲಾಗಿತ್ತು. ಹೆದ್ದಾರಿಯಲ್ಲಿ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೊಂಡಿದ್ದು, ಬಸ್ಸುಗಳು ಹಾಗೂ ಸಿಂಗಲ್ ಎಕ್ಸೆಲ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದಾಗಿ ಪೊಲೀಸ್ ಉಪಾಧೀಕ್ಷಕರು, ಭಟ್ಕಳ ಉಪವಿಭಾಗ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಇವರ ಉಲ್ಲೇಖ ಹಾಗೂ ವರದಿ ಆಧಾರದ ಮೇರೆಗೆ ಸಹಾಯಕ ಆಯುಕ್ತರು ಭಟ್ಕಳ ರವರು ಶಿಫಾರಸ್ಸು ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಸ್ಸುಗಳು ಹಾಗೂ ಸಿಂಗಲ್ ಎಕ್ಸೆಲ್ ವಾಹನಗಳ ಸಂಚಾರಕ್ಕೆ ತೆರೆಯಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಭಾರಿ ವಾಹನಗಳು ಮಾತ್ರ ಈ ಹಿಂದಿನ ಆದೇಶದಂತೆ ಕುಮಟಾ-ಶಿರಸಿ ಮಾರ್ಗವಾಗಿ ಮುಂದಿನ ಆದೇಶದವರೆಗೆ ಚಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಗುರುವಾರ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.