ಕುಮಟಾ : “ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು” ಎಂಬ ನಾಣ್ಣುಡಿಯಂತೆ, ಇಲ್ಲೊಬ್ಬಳು ಹದಿಹರೆಯದ ಯುವ ಪ್ರತಿಭೆ ಇದೀಗ ರಾಜ್ಯಮಟ್ಟದಲ್ಲಿ ತನ್ನ ಪ್ರತಿಭೆಯಿಂದ ಮಿಂಚುತ್ತಿದ್ದಾಳೆ.
ತಾಲೂಕಿನ ಮೂರೂರು ಗ್ರಾಮದ 19 ವರ್ಷದ ಅನನ್ಯಾ ಶಂಭಯ್ಯ ವೈದ್ಯ ಎಂಬುವವಳೇ ಈ ಪ್ರತಿಭೆ. ಇವಳ ತಂದೆ ಶಂಭಯ್ಯ ವೈದ್ಯ ಕೇರಳದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರೆ, ತಾಯಿ ಶಿವಮ್ಮ ಟೇಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ಇತ್ತೀಚೆಗೆ ಡ್ರೀಮ್ ಜೋನ್ ಪ್ಯಾಶನ್ ಡಿಸೈನಿಂಗ್ ಚೆನೈ ಇದರ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ಯಾಶನ್ ಡಿಸೈನಿಂಗ್ ಸ್ಪರ್ಧೆಯಲ್ಲಿ ಈಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಉಡುಪಿಯ ಡ್ರೀಮ್ ಜೋನ್ ಪ್ಯಾಶನ್ ಡಿಸೈನಿಂಗ್ ಸಂಸ್ಥೆಯಲ್ಲಿ ಎರಡು ವರ್ಷ ತರಬೇತಿ ಪಡೆದ ಇವರು ನೆಲ್ಲಿಕೇರಿಯ ಹನುಮಂತ ಬೆಣ್ಣೆ ಪಿಯು ಕಾಲೇಜಿನ ವಿದ್ಯಾರ್ಥಿನಿ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ಯಾಶನ್ ಡಿಸೈನಿಂಗ್ ಸ್ಪರ್ಧೆಯಲ್ಲಿ ಇವಳೇ ತಯಾರಿಸಿದ ವಿಶೇಷ ವಿನ್ಯಾಸದ ಉಡುಪನ್ನು ಬೆಂಗಳೂರು ಹಾಗೂ ಮೈಸೂರು ಮೂಲದ ಮಾಡೆಲಿಂಗ್ ಅಭ್ಯರ್ಥಿಗಳು ಧರಿಸಿ ಪ್ರದರ್ಶನ ನೀಡಿದ್ದಾರೆ. ಈ ವೇಳೆ ಅನನ್ಯಾ ವೈದ್ಯ ಅವಳ ವಿಶೇಷ ವಿನ್ಯಾಸದ ಉಡುಪಿಗೆ ಪ್ರಥಮ ಸ್ಥಾನ ಬಂದಿದ್ದು ಇವಳನ್ನು ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಅನನ್ಯಾ ಕೇವಲ ಪ್ಯಾಶನ್ ಡಿಸೈನಿಂಗ್ ಮಾತ್ರವಲ್ಲದೇ, ಛದ್ಮವೇಶ, ನಾಟಕ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿದ್ದು, ಬಹುಮುಖ ಪ್ರತಿಭೆ ಎಂದೆನ್ನಬಹುದು. ಇದಕ್ಕೆ ಸಾಕ್ಷಿ ಎಂಬಂತೆ 2021-22 ರಲ್ಲಿ ಶಾಲಾ ಮಟ್ಟದಲ್ಲಿ ನಡೆದ ಪ್ಯಾಶನ್ ಡಿಸೈನಿಂಗ್ ನಲ್ಲಿ ಗ್ರೆಂಡ್ ವಿನ್ನರ್ ಆಗಿದ್ದಳು. ತದನಂತರ, Mangalore Inter College Design Festival ನಲ್ಲಿ ಪ್ಲಾಸ್ಟಿಕ್ ಮತ್ತು ಇತರೇ ನಿರುಪಯುಕ್ತ ವಸ್ತುಗಳನ್ನು ಬಳಸಿ, ಕಸದಿಂದ ರಸ ಎಂಬಂತೆ ತಯಾರಿಸಿದ ಡಿಸೈನ್ ಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅದೇ ರೀತಿ Bangalore Natural Training Academy ವತಿಯಿಂದ ನಡೆದ ಪ್ಯಾಶನ್ ಡಿಸೈನಿಂಗ್ ನಲ್ಲೂ ಆಯ್ಕೆಯಾಗಿದ್ದಾಳೆ. ಹಾಗೆಯೇ ರಾಜ್ಯಮಟ್ಟದ ಛದ್ಮವೇಷ ಸ್ಪರ್ಧೆಯಲ್ಲೂ ಕೂಡ ಪ್ರಥಮ ಸ್ಥಾನ ಪಡೆದಿದ್ದಾಳೆ. ಇದಕ್ಕೆ ಹೊನ್ನಾವರದ ಬಣ್ಣದ ಆರ್ಟ್ಸ ನವರು ವೇಷಾಲಂಕಾರ ಮಾಡಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ ಅನನ್ಯಾಗೆ ಕುಮಟಾ-ಹೊನ್ನಾವರ ಕ್ಷೇತ್ರದ ಇಂದಿನ ಸಚಿವರಾದ ಶ್ರೀ ದಿನಕರ ಶೆಟ್ಟಿ ಅವರು 2018 ರಲ್ಲಿ ಸನ್ಮಾನ ಮಾಡಿದ್ದರು.
ರಾಜ್ಯಮಟ್ಟದ ಪ್ಯಾಶನ್ ಡಿಸೈನಿಂಗ್ ನಲ್ಲಿ ಪ್ರಥಮ ಸ್ಥಾನ ಬಂದ ಈ ಸಂದರ್ಭದಲ್ಲಿ, ನಮ್ಮ ನುಡಿ ಸಿರಿ ವಾಹಿನಿಯೊಂದಿಗೆ ಸಂಭ್ರಮ ಹಂಚಿಕೊಂಡ ಅನನ್ಯಾ ವೈದ್ಯ ಇವರ ತಾಯಿ ಶಿವಮ್ಮ, “ನಮ್ಮ ಮಗಳ ಪ್ರತಿಭೆಗೆ ಚಿಕ್ಕ ವಯಸ್ಸಿನಿಂದಲೂ ನೀರೆರೆಯುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದು, ಇಂದು ಸಾರ್ಥಕವಾಯಿತು. ಅವಳು ಹೀಗೆ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ನನ್ನ ಆಶಯ..” ಎಂದರು. ಹಾಗೆಯೇ ಅನನ್ಯಾ ಅವರ ಶಿಕ್ಷಕರೂ ಸಹ ಈ ಯುವ ಪ್ರತಿಭೆ ಇನ್ನಷ್ಟು ಪ್ರಜ್ವಲಿಸಲಿ ಎಂಬಂತೆ ಶುಭ ಹಾರೈಸಿದ್ದಾರೆ..