ಇಸ್ಲಾಮಾಬಾದ್: ಪಾಕಿಸ್ತಾನ ತಂಡದ ಆಟಗಾರರು ಹುಲಿಗಳಂತೆ ಆಟವಾಡಿ ಭಾರತ ತಂಡವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ ಎಂದು ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಹೇಳಿದ್ದಾರೆ.
ಏಕದಿನ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಬುಧವಾರ ಬಿಡುಗಡೆಗೊಂಡಿದೆ. ಎ’ ಗುಂಪಿನಲ್ಲಿ ಭಾರತ ಪಾಕಿಸ್ತಾನ, ನೇಪಾಳ ತಂಡಗಳಿದ್ದು,
ಬಿ’ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ. ಪಾಕಿಸ್ತಾನದ ಲಾಹೋರ್ ಮತ್ತು ಮುಲ್ತಾನ್ ಕ್ರೀಡಾಂಗಣಗಳಲ್ಲಿ 4 ಪಂದ್ಯಗಳು ಮಾತ್ರ ನಡೆಯಲಿದ್ದು, ಉಳಿದ 9 ಪಂದ್ಯಗಳು ಲಂಕಾದ ಕ್ಯಾಂಡಿ ಮತ್ತು ಕೊಲಂಬೋದಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಕೊಲಂಬೋ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ
ಗುರುವಾರ ಏಷ್ಯಾಕಪ್ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಪಾಕ್ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ದಾಖಲಿಸಿದ ಗೆಲುವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ನಮ್ಮ ಕಾಲದಲ್ಲಿ ಭಾರತದ ವಿರುದ್ಧ ಅನೇಕ ಟೂರ್ನಿಗಳಲ್ಲಿ ಗೆದ್ದಿರಲಿಲ್ಲ. ಆದ್ರೆ ಹುಡುಗರು ಇತ್ತೀಚೆಗೆ ದೊಡ್ಡ ಪಂದ್ಯಗಳಲ್ಲಿ ಭಾರತದ ವಿರುದ್ಧ ಗೆಲ್ಲಲ್ಲು ಪ್ರಾರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ತಂಡದಲ್ಲಿ ಪ್ರತಿಭೆ ಇರೋದು ಇದರಿಂದ ಗೊತ್ತಾಗಿದೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ರೆ ಭಾರತದ ವಿರುದ್ಧ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ತಂಡದ ಆಟಗಾರರು ಹುಲಿಗಳಂತೆ ಆಟವಾಡಿ ಭಾರತ ತಂಡವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಟಿ20 ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿದ್ದ ಪಾಕಿಸ್ತಾನ, ಸೂಪರ್ ಫೋರ್ ಹಂತದಲ್ಲಿ ಗೆದ್ದು ಸೇಡು ತೀರಿಸಿಕೊಂಡಿತ್ತು. ಈ ಬೆನ್ನಲ್ಲೇ ನಡೆದ ಟಿ20 ವಿಶ್ವಕಪ್ ಟೀಂ ಇಂಡಿಯಾ ಆರಂಭಿಕ ಪಂದ್ಯದಲ್ಲಿ ಮತ್ತೆ ಪಾಕ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು.