ಮೈಸೂರು, ಜು.20: ಬೆಂಗಳೂರಿನಲ್ಲಿ ನಿನ್ನೆ(ಜು.19) ಶಂಕಿತ ಉಗ್ರರ ಬಂಧನ ಮಾಡಲಾದ ಹಿನ್ನೆಲೆ ರಾಜ್ಯದೆಲ್ಲೆಡೆ ಹೈ ಅಲರ್ಟ್ ಮಾಡಲಾಗಿದೆ. ಅದರಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ನಗರದ ಉದಯಗಿರಿ ಠಾಣಾ ಪೊಲೀಸರಿಂದ ನೈಟ್ ಬೀಟ್ ಮತ್ತಷ್ಟು ಚುರುಕುಗೊಳಿಸಲು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಅವರು ಸೂಚನೆ ನೀಡಿದ್ದಾರೆ. ಜೊತೆಗೆ ಮೈಸೂರಲ್ಲಿ ಕಿಡಿಗೇಡಿಗಳ ಚಟುವಟಿಕೆಗೆ ಬ್ರೇಕ್ ಹಾಕಲು, ಯಾರೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಹೇಳಿದ್ದಾರೆ. ಇನ್ನು ಮೈಸೂರಿನ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವಂತೆ ಸೂಚಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಸೂಚನೆ ಮೇರೆಗೆ ರಾತ್ರಿ ಗಸ್ತು ನಡೆಸಲಾಗಿದೆ.
ನಿನ್ನೆ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಶಂಕಿತ ಉಗ್ರರು
ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲ್ಯಾನ್ ಮಾಡಿದ್ದ ಐವರು ಶಂಕಿತ ಉಗ್ರರನ್ನ ನಿನ್ನೆ (ಜು.19) ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಶಂಕಿತ ಭಯೋತ್ಪಾದಕರನ್ನ ಕರೆದುಕೊಂಡು ಮಡಿವಾಳದ FSL ಆವರಣದ ಇಂಟ್ರಾಗೇಷನ್ ಸೆಲ್ನಲ್ಲಿ ಇರಿಸಿ, ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಶಂಕಿತ ಉಗ್ರರು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದರೆಂದು ತಿಳಿದುಬಂದಿದೆ. ಬಸ್, ಹೋಟೆಲ್, ಬಸ್ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಶಂಕಿತ ಉಗ್ರರು ಬಾಯ್ಬಿಟ್ಟಿದ್ದರು. ಜೊತೆಗೆ ಇದಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯುಎಪಿಎ, 120 B, ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆ ಸೆಕ್ಷನ್ 122 , 121ಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನು 2008ರಲ್ಲಿ ನಡೆದ ಬೆಂಗಳೂರು ಸರಣಿ ಸ್ಫೋಟದ ಆರೋಪಿಯಾಗಿದ್ದ ಟಿ.ನಜೀರ್ ಎಂಬಾತ ಇದರಲ್ಲಿ ಎ1 ಆರೋಪಿಯಾಗಿದ್ದಾನೆ. ಸದ್ಯ ನಜೀರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ವಿದೇಶದಲ್ಲಿ ಇದರ ಜೊತೆಗೆ ಪ್ರಕರಣ ಎ2 ಆರೋಪಿಯಾದ ಜುನೈದ್ ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ಬಂಧಿತರಾಗಿರುವ 5 ಜನ ಆರೋಪಿಗಳಲ್ಲಿ ಸುಹೇಲ್ ಎ3, ಉಮರ್ ಎ4, ಜಾಹಿದ್ ಎ5, ಮುದಾಸಿರ್ ಎ6, ಫೈಜರ್ 7ನೇ ಆರೋಪಿ ಎಂದು ಕೇಸ್ ದಾಖಲಾಗಿತ್ತು.