ದಾಂಡೇಲಿ : ಶಿಕ್ಷಣವಂತ ಸಮಾಜದಿಂದ ರಾಷ್ಟ್ರದ ಉನ್ನತಿ ಸಾಧ್ಯ. ಇಂದು ಎಲ್ಲದಕ್ಕೂ ಶಿಕ್ಷಣವೆ ಮೂಲ. ದೇಶದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಬಹುಮುಖ್ಯವಾಗಿದೆ. ಉತ್ತಮವಾದ ಬದುಕನ್ನು ರೂಪಿಸಲು ಶಿಕ್ಷಣ ಅತ್ಯಗತ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಯನ್ನಿಟ್ಟುಕೊಂಡು ಗುರಿ ಸಾಧನೆಗೆ ನಿರಂತರ ಅಧ್ಯಯನಶೀಲರಾಗಬೇಕು. ಸಾಧನೆಯಿಮದ ಸಫಲತೆ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಆಸಕ್ತಿಯಿಂದ ಮತ್ತು ಶ್ರದ್ಧೆಯಿಂದ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಪಕೀರಪ್ಪ ಪೂಜಾರ್ ಅವರು ಹೇಳಿದರು.
ಅವರು ನಗರದ ಅಂಬೇವಾಡಿಯಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಣವೆ ಪ್ರತಿಯೊಬ್ಬನ ಆಸ್ತಿ ಎನ್ನುವುದನ್ನು ಅರಿತು ಉತ್ತಮ ಶಿಕ್ಷಣವಂತರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ವಿಶ್ವನಾಥ್ ಅವರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿವರಿಸಿ, ಗುರಿ ಮುಟ್ಟುವ ತನಕ ವಿರಮಿಸದೇ ಸದಾ ಪ್ರಯತ್ನಶೀಲರಾದಾಗ ಸಾಧನೆಯ ಸಾಧಕರಾಗಲು ಸಾಧ್ಯ ಎಂದು ಹೇಳಿ, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಲಾಭವನ್ನು ಪಡೆದು ಯಶಸ್ಸಿನೆಡೆಗೆ ಹೆಜ್ಜೆಯಿಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಬೋಧಕರುಗಳಾದ ಬಸವರಾಜ, ವಿಕ್ರಂ, ಸುಖದೇವ ಗುರುವ, ಯಾಸ್ಮೀನ್, ಕೀರ್ತಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೇಯ ಬೋಧಕವೃಂದ, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.