ಫೇಸ್‌ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹೊರಗುತ್ತಿಗೆ ನೌಕರ

ಚಿಕ್ಕೋಡಿ: ವಕೀಲರೊಬ್ಬರ ಕಿರುಕುಳ ತಾಳಲಾರದೆ ಹೊರಗುತ್ತಿಗೆ ನೌಕರ ಫೇಸ್‌ಬುಕ್​​ ಲೈವ್​ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಲಪ್ಪ ಸುರಾಣಿ ಹೊರಗುತ್ತಿಗೆ ನೌಕರ. ಇನ್ನು ಪತಿ ವಿಷಸೇವಿಸಿದ್ದನ್ನು ಕಂಡು ಪತಿ ಮಹಾದೇವಿ ಸುರಾಣಿ ಕೂಡ ವಿಷ ಸೇವಿಸಿದ್ದಾಳೆ. ಸದ್ಯ ಹಾಲಪ್ಪ ಸುರಾಣಿ ಹಾಗೂ ಪತ್ನಿ ಮಹಾದೇವಿ ಸುರಾಣಿ ಅವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಹಾಲಪ್ಪ ಸುರಾಣಿ ರಾಯಬಾಗ ತಹಶಿಲ್ದಾರ ಕಚೇರಿಯ ಭೂ ದಾಖಲಾತಿ ವಿಭಾಗದಲ್ಲಿ ಹೊರಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

ಇವರಿಗೆ ರಾಯಬಾಗದ ವಕೀಲ ಸದಾಶಿವ ನಿಡೋಣಿ ಎಂಬುವವರು 2018ರಲ್ಲಿ ಪರಿಚಯವಾಗುತ್ತಾರೆ. ನಂತರ ಭೂ ದಾಖಲೆ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿದೆ. ಈ ಹಿನ್ನೆಲೆ ಹಾಲಪ್ಪ ಸುರಾಣಿ ಮೇಲೆ ವಕೀಲ ಸದಾಶಿವ ನಿಡೋಣಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಚಾರವಾಗಿ ಹಾಲಪ್ಪ ಸುರಾಣಿ ತಡರಾತ್ರಿ ಫೇಸ್‌ಬುಕ್ ಲೈವ್‌ ಬಂದು “ನನ್ನ ಮೇಲೆ ವಕೀಲ ಸದಾಶಿವ ನಿಡೋಣಿ ಸುಳ್ಳು ಪ್ರಕರಣ ದಾಖಲಿಸಿ 2018 ರಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಸದಾಶಿವ ನಿಡೋಣಿ ಹಾಲಪ್ಪ ಸುರಾಣಿ ಅವರ ಕಛೇರಿಗೆ ಬಂದು ಅವಾಚ್ಯವಾಗಿ ಬೈದು, 10 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ. 10 ಲಕ್ಷ ನೀಡಲು ಆಗಲ್ಲಾ ಎಂದಿದ್ದಕ್ಕೆ ಕೊಡದೆ ಹೋದರೆ ಜೈಲಿಗೆ ಕಳಿಸುವುದಾಗಿ ಹೆದರಿಸಿದ್ದರು. ಅವರಿಗೆ ಹೆದರಿ ನಾನು ಮನೆಯಿಂದ ಹೊರಗಡೆ ಇದ್ದೆ ಜು.18 ರಂದು ಬೇಲ್ ಸಿಕ್ಕ ಬಳಿಕ ಮನೆಗೆ ಬಂದಿದ್ದೇನೆ” ಎಂದು ಹೇಳಿದರು.

ಹೆಂಡತಿ ಮಕ್ಕಳ ಮುಖ ನೋಡಿಕೊಂಡು ಸಾಯಲು ನಿರ್ಧಾರ ಮಾಡಿದ್ದೇನೆ. ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿ ಹಾಲಪ್ಪ ಸುರಾಣ ವಿಷ ಸೇವಿಸಿದ್ದಾರೆ. ಇದನ್ನು ಕಂಡ ಪತ್ನಿ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾರೂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.