ಹಾವೇರಿ, (ಜುಲೈ 19): ರೈತ ದೇಶದ ಬೆನ್ನೆಲುಬು ಅಂತಾರೆ. ಆದ್ರೆ, ಅದೇ ರೈತನಿಗೆ ಮದುವೆಯಾಗಲು ಕನ್ಯೆ ಕೊಡದ ಕಾಲ ಬಂದೊದಗಿದೆ. ಕೃಷಿಕರಿಗೆ ಮದುವೆಯಾಗಲು ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವುದಕ್ಕೆ ಬೇಸತ್ತ ಹಾವೇರಿ(ಃಅವೆರಿ) ಜಿಲ್ಲೆಯ ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊರೆ ಹೋಗಿದ್ದು, ಕನ್ಯೆ ಭಾಗ್ಯ ಆರಂಭಿಸುವಂತೆ ಬ್ಯಾಡಗಿ ತಾಲೂಕಿನ ಮದುವೆ ಆಗದ ಯುವ ರೈತರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮನೆಯೊಡತಿಗೆ 2 ಸಾವಿರ ರೂ. ಕೊಡುವ ಮಾದರಿಯಲ್ಲಿ ರೈತರನ್ನು ಮದುವೆಯಾದವರಿಗೂ ಸಹ ಹಣ ನೀಡುವ ಕಾರ್ಯಕ್ರಮ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
5 ರಿಂದ 6 ಎಕರೆ ಜಮೀನು ಇದರೂ ಸಹ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಕ ಎಂದ ಮಾತ್ರಕ್ಕೆ ಎಷ್ಟೋ ಜನ ಕನ್ಯೆಯನ್ನು ತೊರಿಸುತ್ತಿಲ್ಲ. 5 ಸಾವಿರ ರೂ. ಸಂಬಳ ಬರುವ ವ್ಯಕ್ತಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ. ನಾವು ಕೂಡ ಉತ್ತಮ ಮಳೆ ಬಂದ್ರೆ ಲಕ್ಷಾಂತರ ರೂಪಾಯಿ ಗಳಿಸುತ್ತೇವೆ. ಆದ್ರೆ ಹವಾಮಾನ ವೈಪರಿತ್ಯದಿಂದ ನಷ್ಟ ಅನುಭವುಸುತ್ತಿರುವುದನ್ನು ಅರಿತು ಕೃಷಿ ಮಾಡುತ್ತಿರುವವನು ಕೂಡ ತನ್ನ ಮಗಳಿಗೆ ಕೃಷಿಕನಿಗೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಸಂಬಂಧ ಯುವ ರೈತರನ್ನು ಮದುವೆ ಆದ ಯುವತಿಯರಿಗೆ ಕನಿಷ್ಠ2 ಲಕ್ಷ ರೂ ಪ್ರೋತ್ಸಾಹ ಧನ ಘೋಷಿಸಿ ಎಂದು ಮನವಿ ಮಾಡಿದ್ದಾರೆ.
ರೈತರನ್ನು ಮದುವೆ ಆದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹಾಗೂ ಅರೇ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಿ. ಮನೆಯೊಡತಿಗೆ 2 ಸಾವಿರ ರೂ. ಕೊಡುವ ಮಾದರಿಯಲ್ಲಿ ರೈತರನ್ನು ಮದುವೆ ಆದವರಿಗೂ ಹಣ ಕೊಡಬೇಕು. ಇಂತಹ ಕಾರ್ಯಕ್ರಗಳನ್ನೊಳಗೊಂಡ ಕನ್ಯಾ ಭಾಗ್ಯ ಯೋಜನೆ ಜಾರಿಗೆ ತರಬೇಕೆಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮದುವೆ ಆಗದ ಯುವ ರೈತರು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇನ್ನು ಇತ್ತೀಚೆಗೆಷ್ಟೇ ಕನ್ಯೆ ಹುಡುಕಿ ಹುಡುಕಿ ಸುಸ್ತಾದ ಗದಗ ಜಿಲ್ಲೆಯ ಮುತ್ತು ಹೂಗಾರ ಎನ್ನುವ ಯುವಕನೊಬ್ಬ, ತನಗೊಂದು ಕನ್ಯೆಯನ್ನು ಹುಡುಕಿಕೊಡಿ ಎಂದು ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ಪಿಡಿಒಗೆ ಪತ್ರ ಬರೆಯುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹದು.