ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು

ಹಾಸನ: ಕೌಟುಂಬಿಕ ಕಲಹದಿಂದಾಗಿ ತಾಯಿಯಿಂದ ದೂರವಾಗಿದ್ದ ಮಗುವನ್ನು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ತಾಯಿ ಮಗುವನ್ನು ಒಂದುಗೋಡಿಸಿದ್ದಾರೆ. ಹಾಸನ ನಗರದ ಪೆನ್‌ಷನ್‌ಮೊಹಲ್ಲಾದಲ್ಲಿ ವಾಸವಾಗಿದ್ದ ಕುಟುಂಬವೊಂದರಲ್ಲಿ ಕೌಟುಂಬಿಕ ಕಲಹದಿಂದಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿ ಗಂಡ ತನ್ನ ಮಗುವನ್ನು ತಾಯಿಯಿಂದ ದೂರ ಮಾಡಿದ್ದ. ಈ ವಿಚಾರ ಇಳಿದ ಬಳಿಕ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆ ತಂದೆಯಿಂದ ಮಗುವನ್ನು ತಾಯಿಗೆ ಮಡಿಲಿಗೆ ಹಾಕಿದ್ದಾರೆ.

2016 ರಲ್ಲಿ ನಜ್ನೀನ್ ಜೊತೆ ರಿಜ್ವಾನ್ ಅಹಮದ್​ಗೆ ಮದುವೆಯಾಯಿತು. ಮದುವೆಯಾದ ಹೊಸದರಲ್ಲಿ ಎಲ್ಲವೂ ಚನ್ನಾಗೇ ಇತ್ತು. ರಿಜ್ವಾನ್ ತನ್ನ ಪತ್ನಿ-ಮಗುನೊಂದಿಗೆ ಎರಡು ವರ್ಷ ದುಬೈನಲ್ಲಿದ್ದ. ನಂತರ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ದಂಪತಿ ದುಬೈನಿಂದ ವಾಪಾಸ್ ಬಂದಿದ್ದರು. ಬಳಿಕ ರಿಜ್ವಾನ್ ತನ್ನ ಹೆಂಡತಿ ಹಾಗೂ ಐದು ವರ್ಷದ ಪುಟ್ಟ ಮಗಳು ಆಯೇಷಾಳನ್ನ ಪತ್ನಿಯ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದ. ಇಷ್ಟೆಲ್ಲ ಆದ ಬಳಿಕ ಪತ್ನಿಗೆ ತಿಳಿಯದಂತೆ ಮಗಳನ್ನು ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದ.

ರಿಜ್ವಾನ್ ಅಹಮ್ಮದ್, ಮಗುವನ್ನು ಸಂಬಂಧಿಕರ ಮನೆಯಲ್ಲಿಟ್ಟು ಪತ್ನಿಗೂ ತಿಳಿಸದೆ ಐದು ತಿಂಗಳ ಹಿಂದೆ ಕೀನ್ಯಾಗೆ ತೆರಳಿದ್ದ. ಮಗು ನಾಪತ್ತೆಯಾಗಿದ್ದರಿಂದ ಕಂಗಾಲಾಗಿದ್ದ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಡಿವೈಎಸ್‌ಪಿ ಉದಯ್‌ ಭಾಸ್ಕರ್ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈ ವೇಳೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಹಾಗೂ ಡಿವೈಎಸ್‌ಪಿ ಉದಯ್‌ ಭಾಸ್ಕರ್ ರಿಜ್ವಾನ್ ಮನೆ ಮೇಲೆ ದಾಳಿ ನಡೆಸಿದರು. ಆಗ ತಂದೆ ಮನೆಯಲ್ಲಿಯೇ ಹೆಣ್ಣು ಮಗು ಆಯೇಷಾ ಪತ್ತೆಯಾಗಿದ್ದು ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.

ಮಗುವನ್ನು ಕರೆದುಕೊಂಡು ಹೋಗುವಾಗ ರಿಜ್ವಾನ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಣಿಯಾಗಿದ್ದ ತನ್ನ ಮಗುವನ್ನು ಕಂಡು ತಾಯಿ ನಜ್ನೀನ್ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದು ಧನ್ಯವಾದ ತಿಳಿಸಿದ್ದಾರೆ. ಸದ್ಯ ಮಗು ಬಾಲಮಂದಿರದಲ್ಲಿದೆ. ತನಿಖೆ ವೇಳೆ ರಿಜ್ವಾನ್ ಎರಡನೇ ಮದುವೆಯಾಗಿರುವುದು ಬಯಲಾಗಿದೆ. ಮೊದಲ ಮದುವೆ ವಿಷಯ ಮುಚ್ಚಿಟ್ಟು ನಜ್ನೀನ್ ಜೊತೆ ಎರಡನೇ ವಿವಾಹವಾಗಿದ್ದಾಗಿ ತಿಳಿದುಬಂದಿದೆ. ಆರೋಪಿ ರಿಜ್ವಾನ್ ಎರಡನೇ ಪತ್ನಿಯನ್ನು ಬಿಟ್ಟು ಮಗವನ್ನು ತನ್ನ ಪೋಷಕರ ಬಳಿ ಬಿಟ್ಟು ಕೀನ್ಯಾಗೆ ತೆರಳಿದ್ದಾನೆ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.