ನವದೆಹಲಿ, ಜುಲೈ 18: ಭಾರತದಲ್ಲಿ 2005ರಿಂದ 15 ವರ್ಷದ ಅವಧಿಯಲ್ಲಿ 41ಕೋಟಿ ಭಾರತೀಯರು ಬಹು ಆಯಾಮಗಳ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ಅಧ್ಯಯನ ವರದಿಯೊಂದು ಹೇಳಿತ್ತು. ಇದೀಗ ಭಾರತದ ನೀತಿ ಆಯೋಗ್ 2015ರಿಂದ ಈಚೆಗಿನ ಬಡತನ ನಿರ್ಮೂಲನೆಯ ಮಾಹಿತಿ ಪ್ರಕಟಿಸಿದೆ. ‘ನ್ಯಾಷನಲ್ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್: ಎ ಪ್ರೋಗ್ರೆಸ್ ರಿವ್ಯೂ 2023’ ಜುಲೈ 17ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ 2015-16ರಿಂದ 2019-21ರ ಅವಧಿಯಲ್ಲಿ 13.5 ಕೋಟಿ ಭಾರತೀಯರು ಬಹು ಆಯಾಮದ ಬಡತನದಿಂದ ತಪ್ಪಿಸಿಕೊಂಡಿದ್ದಾರೆ. ಬಡವರ ಸಂಖ್ಯೆ ಅತಿಹೆಚ್ಚು ಇಳಿಮುಖಗೊಂಡಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನ ಪಡೆದಿದೆ. ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನದಲ್ಲೂ ಗಮಾರ್ಹ ಪ್ರಮಾಣದಲ್ಲಿ ಬಡತನ ಕಡಿಮೆ ಆಗಿದೆ.
2015ರ ಏಪ್ರಿಲ್ನಿಂದ 2021ರ ಮಾರ್ಚ್ವರೆಗಿನ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ಅತಿಹೆಚ್ಚು ಕಡಿಮೆ ಆಗಿದೆ. ಶೇ. 32.58ರಷ್ಟಿದ್ದ ಬಡತನ ಶೇ. 19.28ಕ್ಕೆ ಇಳಿದಿದೆ. ನಗರಪ್ರದೇಶಗಳಲ್ಲಿ ಬಡತನ ಶೇ. 8.65ರಿಂದ ಶೇ. 5.27ಕ್ಕೆ ಕಡಿಮೆ ಆಗಿದೆ.
36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 707 ಆಡಳಿತಾತ್ಮಕ ಜಿಲ್ಲೆಗಳಲ್ಲಿನ ಬಡತನದ ಅಂಕಿ ಅಂಶಗಳನ್ನು ಹೊರತೆಗೆದಿರುವ ನೀತಿ ಆಯೋಗ್, ಈ 5 ವರ್ಷದಲ್ಲಿ ಉತ್ತರಪ್ರದೇಶದಲ್ಲಿ 3.43 ಕೋಟಿ ಮಂದಿ ಬಡತನದ ಪೊರೆ ಕಳಚಿ ಹೊರಬಂದಿರುವುದನ್ನು ಎತ್ತಿತೋರಿಸಿದೆ.
‘2015-16ರಿಂದ 2019-21ರ ಅವಧಿಯಲ್ಲಿ ಭಾರತದಲ್ಲಿ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (ಎಂಪಿಐ) ಮೌಲ್ಯ ಅರ್ಧದಷ್ಟು ಕಡಿಮೆ ಆಗಿದೆ. 0.117ರಷ್ಟಿದ್ದ ಎಂಪಿಐ ಮೌಲ್ಯ 0.066ಕ್ಕೆ ಇಳಿದಿದೆ. ಬಡತನದ ತೀವ್ರತೆಯೂ ಶೇ. 47ರಿಂದ ಶೇ. 44ಕ್ಕೆ ಇಳಿದಿದೆ. ಬಡತನ ನಿರ್ಮೂಲನೆಯ ಕಾರ್ಯದಲ್ಲಿ 2030ಕ್ಕೆ ನಿಗದಿ ಮಾಡಿದ ಗುರಿಯನ್ನು ಬಹಳ ಬೇಗನೇ ಭಾರತ ಮುಟ್ಟುತ್ತಿದೆ’ ಎಂದು ನೀತಿ ಆಯೋಗ್ನ ಈ ವರದಿಯಲ್ಲಿ ಹೇಳಲಾಗಿದೆ.