ಅಧಿಕಾರಿಗಳ ವರ್ಗಾವಣೆ; ಚೈತನ್ಯ ಕಳೆದುಕೊಂಡ ಆಡಳಿತ ವ್ಯವಸ್ಥೆ.

ಅಂಕೋಲಾ: ನೂತನವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಪರಿಣಾಮ ತಾಲೂಕು ಆಡಳಿತದ ಪ್ರಮುಖ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಇದರಿಂದಾಗಿ ತಾಲೂಕಿನ ಆಡಳಿತ ವ್ಯವಸ್ಥೆ ಚೈತನ್ಯ ಕಳೆದುಕೊಂಡು, ಜನಸಾಮಾನ್ಯರಿಗೆ ತುರ್ತು ಸ್ಪಂದನೆ ಇಲ್ಲವಾಗಿದೆ.

2019ರಲ್ಲಿ ಕಾಣಿಸಿಕೊಂಡ ಮಹಾಮಾರಿ ಸೋಂಕು ಕೋವಿಡ್ ದೇಶದಲ್ಲೆಡೆ ತಲ್ಲಣ ಉಂಟು ಮಾಡಿತ್ತು. ಅದೇ ವರ್ಷದಿಂದ ಆರಂಭವಾಗಿ 2021ರವರೆಗೆ ಸತತ ಮೂರು ವರ್ಷಗಳ ಭೀಕರ ಪ್ರವಾಹಕ್ಕೆ ತಾಲೂಕಿನ ಜನತೆ ತತ್ತರಗೊಂಡಿದ್ದರು. ಈ ಎರಡು ಸಂದರ್ಭಗಳಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸಿ, ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳು ಅವಿರತ ಶ್ರಮಿಸಿದ್ದರು. ಇದೀಗ ಆ ಅಧಿಕಾರಿಗಳೆಲ್ಲ ಒಬ್ಬೊಬ್ಬರಾಗಿ ತಾಲೂಕಿನಿಂದ ವರ್ಗಾವಣೆಗೊಂಡು ನಿರ್ಗಮಿಸುತ್ತಿದ್ದಾರೆ. ಹೀಗಾಗಿ ಮುಂದೆ ಎದುರಾಗಬಹುದಾದ ನೆರೆಹಾವಳಿ ಮತ್ತಿತರ ಸಮಸ್ಯೆಗಳನ್ನು ಎದುರಿಸುವ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸುವ ಸಮರ್ಥ ಅಧಿಕಾರಿಗಳು ತಾಲೂಕಿಗೆ ಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿದೆ.

ಪುರಸಭೆಯ ಮುಖ್ಯಾಧಿಕಾರಿಯಾಗಿ ಆಗಮಿಸಿದ್ದ ಬಿ ಪ್ರಹ್ಲಾದ್ ತಮ್ಮ ಹರಿತ ಮಾತಿನ ವೈಖರಿ ಅಲ್ಲದೆ ಕ್ಷಿಪ್ರ ಕಾರ್ಯ ಶೈಲಿಯ ಮೂಲಕ ಗಮನ ಸೆಳೆದಿದ್ದರು. ಅವರ ನಂತರ ಆಗಮಿಸಿದ ಶ್ರುತಿ ಗಾಯಕವಾಡ ಸ್ಥಳೀಯ ಸಂಸ್ಥೆಗಳ ಕಾನೂನನ್ನು ಚಾಚು ತಪ್ಪದೇ ಪಾಲಿಸಿ ಹಿರಿಯರ ಮಾರ್ಗದರ್ಶನದಲ್ಲಿ ನಡೆದ ಪರಿಣಾಮ ಚರ್ಚೆಗೆ ಗ್ರಾಸವಾಗಿದ್ದರು. ಮುಂದೆ ಪುರಸಭೆಗೆ ಜನಸ್ಪಂದನೆ ನೀಡುವ ಮುಖ್ಯಾಧಿಕಾರಿಗಳು ದೊರೆಯಲಿಲ್ಲ ಎನ್ನುವ ಕೊರತೆ ನಡುವೆ ಈಗಿರುವ ಮುಖ್ಯಾಧಿಕಾರಿಯೂ ವರ್ಗಾವಣೆಗೊಂಡಿದ್ದಾರೆ.

ಕೋವಿಡ್, ನೆರನಿರ್ವಹಣೆ, ಸಾಮಾಜಿಕ ಭದ್ರತಾ ಸೇವೆಗಳ ಮೂಲಕ ಗಮನ ಸೆಳೆದಿದ್ದ, ಜನಸಾಮಾನ್ಯರ ತಹಶೀಲ್ದಾರ್ ಉದಯ ಕುಂಬಾರ ಕೆಲವು ತಿಂಗಳ ಹಿಂದೆ ಬಡ್ತಿ ಹೊಂದಿದ ಪರಿಣಾಮ ಇಲ್ಲಿಂದ ವರ್ಗಾವಣೆಗೊಂಡಿದ್ದಾರೆ. ಜನಸಾಮಾನ್ಯರಿಗೆ ಸಾಮಾನ್ಯವಾಗಿ ದೊರೆಯುವ ಹಾಗೂ ಜನಪ್ರತಿನಿಧಿಗಳಿಗೆ ಸುಲಭವಾಗಿ ಹೊಂದಿಕೆಯಾಗುವ ವ್ಯಕ್ತಿತ್ವ ಉದಯ ಕುಂಬಾರರವರದಾಗಿತ್ತು.

ತಾಲೂಕು ಆಡಳಿತದ ಪ್ರಮುಖ ಅಂಗವಾಗಿ ಅಂಕೋಲಾದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಸಾವಂತ ಸದ್ಯಕ್ಕೆ ಕಲಘಟಗಿಗೆ ವರ್ಗಾವಣೆಗೊಂಡಿದ್ದಾರೆ. ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಉತ್ತಮ ಆಡಳಿತ ಜ್ಞಾನವನ್ನು ಹೊಂದಿದ್ದ ಅವರ ವರ್ಗಾವಣೆ ಸಿಬ್ಬಂದಿಗಳಿಗೂ ನಿರಾಶೆ ಉಂಟು ಮಾಡಿದೆ.

ಪೊಲೀಸ್ ಇಲಾಖೆಯಲ್ಲಿ ಜನಸಾಮಾನ್ಯರ ಪಿಎಸ್ಐ ಎಂದು ಹೆಸರಾಗಿದ್ದ ಪ್ರೇಮನ ಗೌಡ ಪಾಟೀಲ್ ಇತ್ತೀಚಿಗೆ ವರ್ಗಾವಣೆಗೊಂಡಿದ್ದರು. ಅವರೊಂದಿಗೆ ಪಿಎಸ್ಐ ಪ್ರವೀಣ್ ಕುಮಾರ್ ಮತ್ತು ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ನಿಪುಣರಾಗಿರುವ ಸಿಬ್ಬಂದಿಗಳು ವರ್ಗಾವಣೆಗೊಂಡಿದ್ದಾರೆ. ನಿಷ್ಠುರ ಮತ್ತು ಪ್ರಾಮಾಣಿಕ ಸಿಪಿಐ ಎನಿಸಿಕೊಂಡಿರುವ ಸಂತೋಷ್ ಶೆಟ್ಟಿ, ಕೂಡ ಶೀಘ್ರದಲ್ಲಿ ವರ್ಗಾವಣೆ ಆಗಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಮತ್ತೊಮ್ಮೆ ತಾಲೂಕಿನಲ್ಲಿ ಮಟ್ಕಾ, ಅನಧಿಕೃತ ಸಾರಾಯಿ ಮಾರಾಟದಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆದಂತಿದೆ.

ಒಂದುವರೆ ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಗೆ ಅಂದಿನ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತ ಗಾಂವಕರ ಸೇರಿದಂತೆ ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡು ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು. ಸಮರ್ಥ ಅಧಿಕಾರಿ ಶಶಿಕಾಂತ್ ಕೋಳೆಕರ್ ವರ್ಗಾವಣೆಗೊಂಡು ತಾಲೂಕಿಗೆ ಆಗಮಿಸಿದ ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿ ಬದಲಾವಣೆ ಕಂಡಿತ್ತು. ಕಳಪೆ ಕಾಮಗಾರಿಗಳಿಗೆ ಕಡಿವಾಣ ಬಿದ್ದಿತ್ತು. ಶಶಿಕಾಂತ್ ಕೋಳೆಕರ್ ಅವರ ತುರ್ತು ಸ್ಪಂದನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ತಾಲ್ಲೂಕಿನ ರಾಮನಗುಳಿ- ಡೊಂಗ್ರಿ ಶಾಶ್ವತ ಸೇತುವೆ ಕಾಮಗಾರಿ ಶೀಘ್ರವಾಗಿ ನೆರವೇರಲು ಶಶಿಕಾಂತ್ ಕೋಳೆಕರ್ ಸಾಕಷ್ಟು ಶ್ರಮಿಸಿದ್ದರು. ಹಲವೆಡೆ ಗುಣಮಟ್ಟದ ರಸ್ತೆ ನಿರ್ಮಾಣವಾಗಿದ್ದವು. ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದೆ.

ಪ್ರಮುಖ ಅಧಿಕಾರಿಗಳ ವರ್ಗಾವಣೆಯಿಂದ ತಾಲೂಕಿನ ಜನಸಾಮಾನ್ಯರು ಅಗತ್ಯ ಸೇವೆಗಳನ್ನು ಪಡೆಯುವಲ್ಲಿ ಹಿನ್ನಡೆ ಕಾಣುತ್ತಿದ್ದಾರೆ. ಈ ನಡುವೆ ಮುಖ್ಯ ಅಧಿಕಾರಿಯೊಬ್ಬರು ಅಂಕೋಲಾಕ್ಕೆ ಬಂದು ಏನು ಸಂಪಾದನೆ ಮಾಡಲಾಗಲಿಲ್ಲ ಎನ್ನುವ ಕಾರಣಕ್ಕೆ ವರ್ಗಾವಣೆಗೆ ಪ್ರಯತ್ನಿಸಿ ಸಫಲವೂ ಆಗಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಸ್ವತಂತ್ರ ಚಿತ್ತದಿಂದ ಕಾರ್ಯನಿರ್ವಹಿಸಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಅವಿರತ ಪ್ರಯತ್ನಿಸಿ ಯಶಸ್ವಿ ಆಗಿದ್ದಾರೆ.