ಹೊಂಡ ಬಿದ್ದ ರಸ್ತೆಗೆ ಮಣ್ಣು ಹಾಕಲು ಬಂದಿದ್ದ ಹೊನ್ನಾವರ ಪ.ಪಂ ವಿರುದ್ದ ಸಾರ್ವಜನಿಕರ ಆಕ್ರೋಶ

ಹೊಂಡಗಳಿಂದಲೇ ತುಂಬಿರುವ ಹೊನ್ನಾವರದ ದುರ್ಗಾದೇವಿ ರಸ್ತೆಯಲ್ಲಿ ಮಣ್ಣು ಹಾಕಲು ಪಟ್ಟಣ ಪಂಚಾಯತ್‌ ಮುಂದಾಗಿತ್ತು. ಅದ್ರೆ ರೊಚ್ಚಿಗೆದ್ದ ಸ್ಥಳೀಯರು ಮಣ್ಣು ಹಾಕಲು ಅವಕಾಶ ನೀಡದೇ, ರಸ್ತೆ ದುರಸ್ಥಿಪಡಿಸಿಕೊಡುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ

ಇದು ಹೊನ್ನಾವರದ ವಿಠ್ಠಲ್‌ ರುಕ್ಮಾಯಿ ದೇವಸ್ಥಾನದ ಎದುರಿಗಿರುವ ದುರ್ಗಾದೇವಿ ಮುಖ್ಯರಸ್ತೆ.. ಇದನ್ನ ರಸ್ತೆ ಅನ್ನೋದಕ್ಕಿಂತ ಹೊಂಡಗಳ ಸಾಮ್ರಾಜ್ಯ ಅಂದ್ರೆ ತಪ್ಪಾಗೋದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ರಸ್ತೆಗಳು ಹದಗೆಟ್ಟು ಹೋಗಿವೆ

ಕಳೆದ ಒಂದು ತಿಂಗಳ ಹಿಂದೆ ವಿಠ್ಠಲ್‌ ರುಕ್ಮಾಯಿ ದೇವಸ್ಥಾನದ ವರ್ದಂತಿ ಉತ್ಸವದ ನಿಮಿತ್ತ, ಇಲ್ಲಿನ ರಸ್ತೆಗಳಿಗೆ ಡಾಂಬರ್‌ ಹಾಕಲಾಗಿತ್ತು. ಆದ್ರೆ ಈ ರಸ್ತೆ ನಿರ್ಮಾಣವಾದ ಕೇವಲ ಒಂದೇ ತಿಂಗಳಲ್ಲಿ ಅಸಲಿಯತ್ತು ಬಯಲಾಗಿದೆ. ಈ ರಸ್ತೆ ಕಾಮಗಾರಿ ಎಷ್ಟರಮಟ್ಟಿಗಿದೆ ಅನ್ನೋದಕ್ಕೆ ಈ ಹೊಂಡಗಳೇ ಸಾಕ್ಷಿ

ಆದ್ರೀಗ ಮಳೆಗಾಲ ಶುರುವಾಗಿದ್ದರಿಂದ ಹೊಂಡಗಳಲ್ಲಿ ನೀರು ನಿಂತು, ವಾಹನ ಸಂಚಾರ, ಜನ ಸಂಚಾರಕ್ಕೆ ತೀವ್ರ ತೊಂದರೆಯಾಗ್ತಿದೆ. ರಸ್ತೆ ದುರಸ್ಥಿಪಡಿಸುವಂತೆ ಸ್ಥಳೀಯರು ಹಲವು ಬಾರಿ ಪಟ್ಟಣ ಪಂಚಾಯತ್‌ಗೆ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗ್ಲಿಲ್ಲ. ಆದ್ರೀಗ ಹದಗೆಟ್ಟ ರಸ್ತೆ ದುರಸ್ತಿಪಡಿಸಲು ಪ. ಪಂಚಾಯತ್‌ ಸಿಬ್ಬಂದಿ ಜೆಸಿಬಿ ಮತ್ತು ಮಣ್ಣು ತುಂಬಿದ ಟಿಪ್ಪರ್‌ನೊಂದಿಗೆ ಆಗಮಿಸಿದ್ರು. ಈ ವೇಳೆ ರೊಚ್ಚಿಗೆದ್ದ ಸ್ಥಳೀಯರು ಪ. ಪಂಚಾಯತ್‌ ಸಿಬ್ಬಂದಿಯನ್ನು, ಜೆಸಿಬಿ ಮತ್ತು ಮಣ್ಣು ತುಂಬಿದ ಟಿಪ್ಪರ್‌ ಅನ್ನು ತಡೆದು ನಿಲ್ಲಿಸಿ ತರಾಟೆಗೆ ತಗೆದುಕೊಂಡಿದ್ದಾರೆ…

ನೀವು ಹೊಂಡಗಳಿಗೆ ಮಣ್ಣು ಹಾಕಿ ತೇಪೆ ಒರಸೋ ಕೆಲಸ ಮಾಡೋದು ಬೇಡ. ಹಾಳಾಗಿರೋ ರಸ್ತೆಯನ್ನು ದುರಸ್ಥಿಪಡಿಸಿ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ.. ಪ.ಪಂ ಸಿಬ್ಬಂದಿ ಮತ್ತು ದುರಸ್ಥಿ ಮಾಡಲು ತಂದಿದ್ದ ವಾಹನಗಳನ್ನು ವಾಪಸ್‌ ಕಳಿಸಿದ್ದಾರೆ.

ಇನ್ನು ಪಟ್ಟಣ ಪಂಚಾಯ್ತಿ ಸದಸ್ಯ ವಿಶ್ವನಾಥ್‌ ಗೊಂಡ, ಗುತ್ತಿಗೆದಾರ ಏನ್‌ ಮಾಡಿದ್ದಾನೆ ಅಂತ ಗೊತ್ತಿಲ್ಲ. ಅದಕ್ಕೆ ಮಣ್ಣು ಹಾಕೋಸೋಕೆ ಬಂದಿದ್ದೇ. ಈ ರಸ್ತೆಯ ಎಸ್ಟಿಮೇಟ್‌ ಮಾಡಿದ್ದೇ ಫೇಲ್‌ ಆಗಿದೆ ಅಂತ ಬೇಜವಾಬ್ದರಿಯ ಉತ್ತರ ನೀಡಿದ್ದಾರೆ. ಮತ್ತೋರ್ವ ಪಟ್ಟಣ ಪಂಚಾಯತ್‌ ಸದಸ್ಯ ವಿಜಯ್‌ ಕಾಮತ್‌, ಗುತ್ತಿಗೆದಾರನದ್ದೇ ತಪ್ಪು ಅಂದಿದ್ದಾರೆ. ಹಾಗಾದ್ರೆ ರಸ್ತೆ ನಿರ್ಮಾಣ ಮಾಡುವಾಗ ಪಟ್ಟಣ ಪಂಚಾಯತ್‌ ಸದಸ್ಯರು ಕಡ್ಲೆಪುರಿ ತಿಂತಿದ್ರಾ ಅಂತ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ…

ಒಟ್ನಲ್ಲಿ ಪಟ್ಟಣ ಪಂಚಾಯತ್‌ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡದೇ ಹಾರಿಕೆ ಉತ್ತರವನ್ನು ಮಾತ್ರ ಸಿದ್ದಪಡಿಸಿಟ್ಟುಕೊಂಡಿದ್ದಾರೆ. ಆಗೋ ಅನಾಹುತಕ್ಕೆಲ್ಲ ಕಾಗಕ್ಕ ಗುಬ್ಬಕ್ಕನ ಕತೆ ಹೇಳುತ್ತಿದ್ದಾರೆ. ಹೀಗೆ ಜನಾಕ್ರೋಶ ವ್ಯಕ್ತವಾದ ಮೇಲಾದ್ರೂ ಪ.ಪಂ ಈ ಅವ್ಯವಸ್ಥೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ…