ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಯನ್ನು 24 ಗಂಟೆಗಳೊಳಗೆ ಬಂಧಿಸಿದ ಪೊಲೀಸರು

ಕುಮಟಾ : ಎರಡು ದಿನಗಳ ಕೆಳಗೆ, ಮೊಬೈಲ್ ಮತ್ತು ಹಣದ ಆಸೆಗೆ ಹೋಟೆಲ್ ನಲ್ಲಿ ಮಲಗಿದ್ದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿ, ಆ ವ್ಯಕ್ತಿಯ ಹಣ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು, ಘಟನೆ ನಡೆದ 24 ಗಂಟೆಯಲ್ಲಿ ಬಂಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ‌ ತಾಲೂಕಿನ ಕಮ್ಮರಡಿ ಗ್ರಾಮದ ಸುಬ್ರಹ್ಮಣ್ಯ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ಕುಮಟಾ ಹೆಗಡೆಯ ಶಿವಪುರ ನಿವಾಸಿ ಕೃಷ್ಣ ಮಂಜಯ್ಯ ಶೆಟ್ಟಿ (60) ಹಲ್ಲೆಗೊಳಗಾದವರು. ಇವರು ಹಲವಾರು ವರ್ಷಗಳಿಂದ ಕುಮಟಾದ ಸುಖಸಾಗರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಕೆಲಸ ಮಾಡಿ ಹೋಟೆಲ್ ನಲ್ಲಿಯೇ ಮಲಗುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸದರಿ ಆರೋಪಿ ಸುಬ್ರಹ್ಮಣ್ಯ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇವರಿಬ್ಬರೂ ಹೋಟೆಲ್ ನಲ್ಲಿ ಒಂದೇ ಕಡೆ ಮಲಗುತ್ತಿದ್ದರು. ಆಗಲೇ ಈ ಸುಬ್ರಹ್ಮಣ್ಯ, ಕೃಷ್ಣ ಶೆಟ್ಟಿ ಅವರ ಬಳಿಯಿದ್ದ, ಹಣ ಮತ್ತು ಮೊಬೈಲ್ ದೋಚಲು ಸ್ಕೆಚ್ ಹಾಕಿ, ಜುಲೈ 14 ರ ರಾತ್ರಿ ಕೃಷ್ಣ ಶೆಟ್ಟಿ ಮಲಗಿದ್ದ ವೇಳೆ ಅವರ ಕುತ್ತಿಗೆ ಹಿಸುಕಿದ್ದಲ್ಲದೇ ತಲೆಯ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿ, ಹೆದರಿಸಿ, ಅವರ ಬಳಿಯಿದ್ದ ಎರಡು ಮೊಬೈಲ್ ಮತ್ತು 4500 ರೂ ನಗದು ದೋಚಿ ಪರಾರಿಯಾಗಿದ್ದ. ಈ ಕುರಿತು ಕೃಷ್ಣ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು.

ಕುಂದಾಪುರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಸದರಿ ಆರೋಪಿ ಸುಬ್ರಹ್ಮಣ್ಯ ತನ್ನೂರಾದ ಕಮ್ಮರಡಿಯ ತನ್ನ ಮನೆಯಲ್ಲಿ ಜಗಳವಾಡಿಕೊಂಡು ಊರುರು ಅಲೆಯುತ್ತಿದ್ದ ಎನ್ನಲಾಗಿದೆ. ಕುಮಟಾದಲ್ಲಿ ಅಮಾಯಕ ವೃದ್ಧನ ಮೇಲೆ ಹಲ್ಲೆ ಮಾಡಿ, ಹಣ ಮತ್ತು ಮೊಬೈಲ್ ದೋಚಿದ ಈತ ಕುಂದಾಪುರದಲ್ಲಿರುವ ಖಾಸಗಿ ಹೋಟೆಲ್ ಗಳಲ್ಲಿ ಮತ್ತೆ ಕೆಲಸ ಕೊಡಲು ಕೇಳುತ್ತಿದ್ದನಂತೆ. ಕುಂದಾಪುರದ ಪ್ರಸಿದ್ದ ಹರಿಪ್ರಸಾದ್ ಹೋಟೆಲ್ ವೊಂದರಲ್ಲಿ ಆಗಲೇ ಕೆಲಸಕ್ಕೂ ಸೇರಿದ್ದನಂತೆ. ಆದರೆ ಕುಮಟಾದ ಪೊಲೀಸರು ಆಗಲೇ ಬಲೆ ಬೀಸಿದ್ದು, ಆತ ಕದ್ದುಕೊಂಡು ಹೋದ ಮೊಬೈಲ್ ನ ಟ್ರ್ಯಾಕ್ ಮಾಡಿ, ಹರಿಪ್ರಸಾದ್ ಹೋಟೆಲ್ ಗೆ ಎಂಟ್ರಿ ಕೊಟ್ಟು, ಸುಬ್ರಹ್ಮಣ್ಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಕಾರವಾರ ಎಸ್.ಪಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಮತ್ತು ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ತಿಮ್ಮಪ್ಪ ನಾಯ್ಕ, ಪದ್ಮಾ ದೇವಳಿ, ಸಿಬ್ಬಂದಿಗಳಾದ ಗಣೇಶ್ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ ಹಾಗೂ ಶಿವಾನಂದ ಜಾಡರ್ ರನ್ನು ಒಳಗೊಂಡ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಈ ಮೊದಲು ದೇವಿಮನೆ ಘಟ್ಟದಲ್ಲಿ ಕೊಲೆಯಾದ ಮಹಿಳೆಯ ಕೊಲೆಯನ್ನು ಬೇಧಿಸುವಲ್ಲಿ ಯಶಸ್ವಿಯಾದ ಕುಮಟಾ ಪೊಲೀಸ್ ತಂಡ ಈ ಕಾರ್ಯಾಚರಣೆಯಲ್ಲೂ ಯಶಸ್ವಿಯಾಗಿದ್ದು, ಎಲ್ಲೆಡೆಗಳಿಂದ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಮಾತ್ರವಲ್ಲ ಸೂಕ್ತ ಬಹುಮಾನ ಕೂಡಾ ಘೋಷಿಸಲಾಗಿದೆ.