ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ : ದೇಶದಾದ್ಯಂತ ‘ವಕ್ಫ್ ಬೋರ್ಡ್ ಕಾಯ್ದೆ’ ರದ್ದುಗೊಳಿಸಲುಹಿಂದೂ ರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಬೇಡಿಕೆ

ಭಟ್ಕಳ : ಕರ್ನಾಟಕದಲ್ಲಿ ಹಿಂದುಗಳ ಹತ್ಯೆಗೆ ಖಂಡನೆ ಹಿಂದುಗಳ ರಕ್ಷಣೆಗೆ ಆಗ್ರಹಿಸಿ, ದೇಶಾದ್ಯಂತ ವಕ್ಫ ಬೋರ್ಡ್ ಕಾಯ್ದೆ ರದ್ದುಗೊಳಿಸಲು, ವಕ್ಫಬೋರ್ಡ ವಶಪಡಿಸಿಕೊಂಡ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಿ ನೀಡಬೇಕೆಂದು ಆಗ್ರಹಿಸಿ ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ‌ ಮೂಲಕ ಪ್ರತಿಭಟನೆಯನ್ನು ಮಾಡಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ. ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್ ನ
ವೇಣುಗೋಪಾಲ ಇವರ ಹತ್ಯೆ, ಸೇರಿದಂತೆ ಇನ್ನೂ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ನಾಗರಕಟ್ಟೆಯ ಪೂಜೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲಬುಗಳನ್ನು ದೇವಸ್ಥಾನ, ಹಿಂದೂ ಮನೆಗಳ ಎದುರು ಎಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ, ಹಾಗಾಗಿ ಹಿಂದೂ ಕಾರ್ಯಕರ್ತರಿಗೆ, ಹಿಂದೂ ಧರ್ಮಕ್ಕೆ ಹೋರಾಟ ಮಾಡುವವರಿಗೆ ರಕ್ಷಣೆ ನೀಡಬೇಕು, ಹಿಂದೂಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ತನ್ನ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಸರಕಾರಿ ಮತ್ತು ಖಾಸಗಿ ಜಮೀನುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಆ ಮೂಲಕ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದೊಂದು ದೊಡ್ಡ ‘ಲ್ಯಾಂಡ್ ಜಿಹಾದ್’ ಆಗಿದೆ. ಹಾಗಾಗಿ ಈ ಕಾನೂನನ್ನು ರದ್ದುಗೊಳಿಸಿ ಜಮೀನಿನ ನಿಜವಾದ ಮಾಲೀಕರಿಗೆ ಅದರ ಅಧಿಕಾರವನ್ನು ನೀಡಬೇಕು.

ದೇಶದಲ್ಲಿ ’ಸಮಾನ ನಾಗರಿಕ ಕಾನೂನು’ ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳು, ಕಾನೂನುಗಳು, ಆಯೋಗಗಳು, ಮಂಡಳಿಗಳು, ಸರಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲರಿಗೂ ಸಮಾನ ನಡವಳಿಕೆ ಸಿಗುವಂತಾಗಬೇಕು. ಈ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ‘ವಕ್ಫ್ ಕಾನೂನು’ ವಿರುದ್ಧ ಪ್ರಬಲ ಚಳವಳಿ ನಡೆಸಬೇಕಾಗುತ್ತದೆ ಎಂದು ಈ ಆಂದೋಲನದ ಮೂಲಕ ಎಚ್ಚರಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಧನ್ಯ ಕುಮಾರ್ ಜೈನ್, ರಾಜ್ಯ ಪಶ್ಚಿಮ ಘಟ್ಟದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಸುಬ್ರಾಯ ದೇವಡಿಗ, ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ, ಉದ್ಯಮಿಗಳಾದ ಧೀನರಾಜ ಜೈನ್, ರಾಧಿಕಾ ಜೈನ್, ಹಿಂದೂ ಜನಜಾಗೃತಿ ಸಮಿತಿಯ ಸಂತೋಷ ಭಟ್ಕಳ, ಕೃಷ್ಣ ನಾಯ್ಕ, ಗಂಗಾ ಮೊಗೇರ, ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಭಟ್ಕಳ ತಾಲ್ಲೂಕು ಜೈನ್ ಸಮುದಾಯದಿಂದ ಪ್ರತ್ಯೇಕ ಮನವಿ ಸಲ್ಲಿಕೆ

ಜುಲೈ 7 ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದ ಪರಮ ಪೂಜ್ಯ ಆಚಾರ್ಯ ಮುನಿ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಜೈನ ಸಮಾಜಕ್ಕೆ ಹಾಗೂ ಸಮಾಜದ ಬಾಂಧವರಿಗೆ ಆಘಾತವನ್ನು ಉಂಟು ಮಾಡಿದೆ. ಮುನಿ ಮಹಾರಾಜರನ್ನು ಘೋರವಾಗಿ ಹತ್ಯೆ ಮಾಡಿರುವುದು ಖಂಢನೀಯ ಈ ಹೇಯ ಕ್ರತ್ಯವನ್ನು ಮಾಡಿರುವ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಭಟ್ಕಳ ತಾಲ್ಲೂಕು ಜೈನ ಸಮುದಾಯದವರು ಮುಖ್ಯಮಂತ್ರಿಗಳಿಗೆ ಶನಿವಾರದಂದು ತಾಲ್ಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.

ಅಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪ್ರಿಯರು ಆಗಿರುವ ಜೈನ ಮುನಿಗಳ ಮೇಲೆ ಇಂತಹ ಕ್ರತ್ಯಗಳು ಮರುಕಳಿಸದಂತೆ ರಕ್ಷಣೆ ನೀಡಬೇಕು. ಜೈನ ಬಸದಿಗಳು, ಮಠಗಳು, ಮುನಿಗಳು, ಸಾಧು ಸಂತರು, ಮಾತಾಜೀಯವರು ಮತ್ತು ಅವರುಗಳು ವಾಸ್ತವ್ಯವಿರುವ ಆಶ್ರಮ ಹಾಗೂ ಅವರ ವಿಹಾರ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಭದ್ರತಾ ಕ್ರಮವನ್ನು ಸರಕಾರವು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಭಟ್ಕಳ ತಾಲ್ಲೂಕು ಜೈನ ಸಮುದಾಯದ ಅಧ್ಯಕ್ಷ
ಶೈಲೇಂದ್ರ ಗೌಡ(ಜೈನ್), ಉಪಾಧ್ಯಕ್ಷ ಧನ್ಯಕುಮಾರ ಜೈನ್, ಪಾರ್ಶ್ವನಾಥ ಜೈನ್, ಪ್ರಸಾದ ಜೈನ್, ಜಗದೀಶ ಜೈನ್ ಶಿರಾಲಿ,
ಪದ್ಮನಾಭ ಜೈನ್, ಪದ್ಮಾವತಿ ಮಹಿಳಾ ಸಂಘದ ಮಹಿಳೆಯರು,
ಗೋವಿಂದ ನಾಯ್ಕ, ರಮೇಶ ನಾಯ್ಕ, ಹನುಮಂತ ನಾಯ್ಕ, ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ ಮುಂತಾದ ಜೈನ ಸಮುದಾಯದ ಪ್ರಮುಖರು ಇದ್ದರು.