ಕುಮಟಾ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುತ್ತಿರುವ ಜಿ.ಎಸ್ ಹೆಗಡೆ ಅಜ್ಜೀಬಳ ನೆನಪಿನ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪುರಸ್ಕಾರಕ್ಕೆ ಕುಮಟಾದ ಪ್ರಜಾವಾಣಿ ವರದಿಗಾರ ಎಂ.ಜಿ.ನಾಯ್ಕ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2021 ರ ಪತ್ರಕರ್ತರ ದಿನಾಚರಣೆಯಂದು ಅಂಕೋಲಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರಿಗೆ ತಾನು ನೀಡುವ ‘ಬಾರ್ಡೋಲಿ ಗೌರವ ಪ್ರಶಸ್ತಿ’ಯನ್ನು ಇವರಿಗೇ ಪ್ರದಾನ ಮಾಡಿತ್ತು. ಇದೀಗ ಎಂ.ಜಿ.ನಾಯ್ಕ ಅಜ್ಜೀಬಳ ದತ್ತಿ ಪ್ರಶಸ್ತಿಗೂ ಭಾಜನರಾಗಿರುವುದು ಕುಮಟಾ ತಾಲೂಕಿನ ಪತ್ರಕರ್ತರೊಬ್ಬರಿಗೆ ಸಂದ ವಿಶೇಷ ಗೌರವ ಎನ್ನಬಹುದು.
ಸಾಹಿತಿ ಹುಳಗೋಳ ನಾಗಪತಿ ಹೆಗಡೆಯವರು ತಮ್ಮ ಸಂಪಾದಕತ್ವದ ‘ಅಗ್ರಮಾನ್ಯ ಸಹಕಾರಿ’ ಎಂಬ ಗ್ರಂಥದಲ್ಲಿ ‘ಜಿ.ಎಸ್.ಹೆಗಡೆ ಅಜ್ಜೀಬಳ ಅವರು ಸ್ವತಃ ಶ್ರೇಷ್ಠ ಪತ್ರಕರ್ತರಾಗಿದ್ದವರು. 60-70 ವರ್ಷಗಳ ಹಿಂದೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಯಾವುದೇ ತರಬೇತಿ ಕೋರ್ಸಗಳಿಲ್ಲದ ಸಂದರ್ಭದಲ್ಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ, ವರದಿ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪತ್ರಕರ್ತರ ಪತ್ರಕರ್ತರೆನಿಸಿಕೊಂಡವರು’ ಎಂದು ಉಲ್ಲೇಖಿಸಿದ್ದಾರೆ. ಮೂರುವರೆ ದಶಕಗಳ ಕಾಲ ಉತ್ತರಕನ್ನಡ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತಮ್ಮ ಹೆಜ್ಜೆ ಗುರುತನ್ನು ದಾಖಲಿಸಿದ, ತಮ್ಮ ಸುದೀರ್ಘ ಅನುಭವದ ಮೂಲಕ ತಾವೇ ಸ್ವತಃ ಪತ್ರಕರ್ತರಿಗೆ ತರಬೇತಿ ನೀಡುವ ಕೇಂದ್ರವಾಗಿ ಮಾರ್ಪಟ್ಟ, ‘ಶಿರಸಿಯ ನ್ಯೂಸ್ ಬ್ಯೂರೋ’ ಎಂದು ಕರೆಯಲ್ಪಡುತ್ತಿದ್ದ ಅಜ್ಜೀಬಳರ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿ, ಆಯ್ದ ಪತ್ರಕರ್ತರನ್ನು ಪುರಸ್ಕರಿಸುತ್ತಿರುವ ಸಂಘಟನೆಯನ್ನು ಶ್ಲಾಘಿಸಲೇಬೇಕು.
ಪ್ರಸ್ತುತ ಪ್ರಶಸ್ತಿಗೆ ಭಾಜನರಾದ ಎಂ.ಜಿ.ನಾಯ್ಕರು ಹೆಬೈಲ್ ಗ್ರಾಮದ ಪಟೇಲರಾಗಿದ್ದ ಬೋಗರಿ ಬೈಲ್ ನ ಗೋವಿಂದ ನಾಯ್ಕ ಹಾಗೂ ದೇವಮ್ಮ ದಂಪತಿ ಪುತ್ರರು. ಇವರಿಗೆ ಪತ್ರಿಕೋದ್ಯಮದಲ್ಲಿ ಸುಮಾರು 25 ವರ್ಷಗಳ ಅನುಭವವಿದೆ. ಮೊದಲು ಸಂಯುಕ್ತ ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗದಲ್ಲಿ ಕಾರ್ಯ ಮಾಡಿದ್ದರು. ನಂತರ ಕನ್ನಡ ಜನಾಂತರಂಗ ಪತ್ರಿಕೆ ಚಿಕ್ಕಮಂಗಳೂರು, ಮಂಗಳೂರು, ಮಡಿಕೇರಿ, ಹೊನ್ನಾವರ, ಕುಮಟಾಗಳಲ್ಲಿ ತನ್ನ ಕಛೇರಿ ಮಾಡಿದಲ್ಲೆಲ್ಲಾ ಗಣಪತಿ ಸ್ತುತಿ ಇವರದ್ದೇ ಆಗಿತ್ತು. ನಂತರ 1998 ರಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಕುಮಟಾದ ವರದಿಗಾರರಾಗಿ ಸೇರಿಕೊಂಡರು.
ಕೇವಲ ವರದಿಗಷ್ಟೇ ತೃಪ್ತರಾಗದ ಇವರು ಕುಮಟಾದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷತೆಯನ್ನು ಸರಿದೂಗಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಹಲಾ ಮಂಡಳಿಯಲ್ಲಿದ್ದಾರೆ. ಹೀಗೆ ಇವರು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಇಂದಿಗೂ ಸಕ್ರೀಯವಾಗಿದ್ದಾರೆ..
ನಮ್ಮ ಮಾದ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು, “ಈ ಪ್ರಶಸ್ತಿ ಸಿಗುತ್ತಿರುವುದು ನನಗೆ ಅತೀವ ಸಂತಸವನ್ನು ತಂದಿದೆ ಮಾತ್ರವಲ್ಲ, ಪತ್ರಿಕೋದ್ಯಮದಲ್ಲಿ ನನ್ನ ಇಷ್ಟು ವರ್ಷದ ಕಾರ್ಯನಿಷ್ಠೆಗೆ ಸಂದ ಪ್ರತಿಫಲ ಇದಾಗಿದೆ” ಎಂದು ಹೇಳಿದರು..