ದಾಂಡೇಲಿ : ಕಾರ್ಯನಿರತ ಪತ್ರಕರ್ತರ ಸಂಘ ದಾಂಡೇಲಿ ಇವರ ಆಶ್ರಯದಡಿ ನಗರದ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಶ್ರಮ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪ್ರಜಾವಾಣಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಹಿರಿಯ ಉಪ ಸಂಪಾದಕಿ ಕೃಷ್ಣಿ ಶಿರೂರ ಅವರು ಉದ್ಘಾಟಿಸಿ ಮಾತನಾಡುತ್ತಾ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪತ್ರಿಕಾ ವೃತ್ತಿ ಅತ್ಯಂತ ಶ್ರೇಷ್ಟ ವೃತ್ತಿ ಹಾಗೂ ಸಾಹಸಿಕ ವೃತ್ತಿಯಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತನ್ನ ಹರಿತವಾದ ಲೇಖನಿಯ ಮೂಲಕ ತಿದ್ದುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ. ಹಲವಾರು ಎಡರು ತೊಡರುಗಳ ನಡುವೆಯು ಪತ್ರಕರ್ತನ ವೃತ್ತಿ ಬದುಕು ಸಮಾಜಕ್ಕಾಗಿಯೆ ಮೀಸಲಾಗಿದೆ. ಸಮಾಜದ ಕಣ್ಣುಗಳಾಗಿರುವ ಪತ್ರಕರ್ತರು ಸಹ ಒಂದು ರೀತಿಯಲ್ಲಿ ಬಲಿಷ್ಟ ನಾಡು ಕಟ್ಟುವ ಸೇನಾನಿಗಳಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್ ಅವರು ಭಾಗವಹಿಸಿ ಮಾತನಾಡುತ್ತಾ ದಾಂಡೇಲಿಯ ಪತ್ರಕರ್ತರು ನಗರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದಾಂಡೇಲಿಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಗರ ಸಭೆಯ ವತಿಯಿಂದಲೂ ಸಹಕಾರ ನೀಡುವುದಾಗಿ ಹೇಳಿದರು.
ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಪೌರಾಯುಕ್ತರಾದ ಆರ್.ಎಸ್.ಪವಾರ್, ಸಿಪಿಐ ಬಿ.ಎಸ್.ಲೋಕಾಪುರ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ರಾವ್ ಅವರುಗಳು ಸಂದರ್ಭೋಚಿತವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕಳೆದ ಅನೇಕ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಪತ್ರಕರ್ತರಾದ ಗುರುಶಾಂತ ಜಡೆಹಿರೇಮಠ, ನಗರದ ಪ್ರವಾಸಿ ಮಂದಿರದಲ್ಲಿ ಅನೇಕ ವರ್ಷಗಳಿಂದ ನಿರ್ವಾಹಕರಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಜೊತೆಗೆ ತನ್ನಿಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿರುವ ನಜೀರ್ ಸಾಬ್ ಮಡಗಾಂವಿ, ಮತ್ತು ಮಗಳನ್ನು ನ್ಯಾಯವಾದಿಯನ್ನಾಗಿಸಿದ ಗೌಳಿ ಸಮುದಾಯದ ಬೊಮ್ಮನಹಳ್ಳಿಯ ನಾಗೀಬಾಯಿ ಲಕ್ಕು ಪಟಕಾರೆಯವರನ್ನು ಸನ್ಮಾನಿಸಲಾಯ್ತು.
ಸನ್ಮಾನಿತರ ಪರವಾಗಿ ಗುರುಶಾಂತ ಜಡೆಹಿರೇಮಠ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೃಷ್ಣ ಪಾಟೀಲ ಅವರು ಸಂಘದ ಕಾರ್ಯಚಟುವಟಿಕೆಗಳಿಗೆ ಸರ್ವರ ಸಹಕಾರವಿರಲೆಂದು ಕೋರಿದರು.
ಮಾನಸ.ವಿ.ವಾಸರೆ ಪ್ರಾರ್ಥನೆ ಗೀತೆ ಹಾಡಿದರು. ಬಿ.ಎನ್.ವಾಸರೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರನ್ನು ಅಕ್ಷಯಗಿರಿ ಗೋಸಾವಿ, ಡಾ.ಬಿ.ಪಿ.ಮಹೇಂದ್ರಕುಮಾರ್ ಮತ್ತು ಪ್ರವೀಣಕುಮಾರ್ ಸುಲಾಖೆ ಪರಿಚಯಿಸಿದರು. ಸಂದೇಶ್.ಎಸ್.ಜೈನ್ ವಂದಿಸಿದರು. ಯು.ಎಸ್.ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು. ಪತ್ರಕರ್ತರಾದ ರಾಜೇಶ್ ತಳೇಕರ್, ಸರ್ಪರಾಜ್ ಶೇಖ, ಅಪ್ತಾಬ್ ಶೇಖ ಸಹಕರಿಸಿದರು.