ಹಳಿಯಾಳ : ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಮಲ್ಲಿಕಾರ್ಜುನ್.ವಿ.ಅಷ್ಟೇಕರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಹಳಿಯಾಳ ತಾಲ್ಲೂಕಿನ ವಕೀಲರ ಸಂಘದ ಆಶ್ರಯದಡಿ ಇಂದು ಶುಕ್ರವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯ್ತು.
ವಕೀಲರ ಮೇಲಿನ ಹಲ್ಲೆಯನ್ನು ಖಂಡಿಸಿ ಹಳಿಯಾಳ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆಯು ಶಿವಾಜಿ ವೃತ್ತದ ಬಳಿ ಸಂಪನ್ನಗೊಂಡು, ಅಲ್ಲಿ ಮಾನವ ಸರಪಳಿಯನ್ನು ರಚಿಸಿ ಆರೋಪಿಗೆ ಕಠಿಣ ಶಿಕ್ಷಿ ವಿಧಿಸಬೇಕೆಂದು ಮತ್ತು ವಕೀಲರ ರಕ್ಷಣಾ ಕಾಯ್ದೆ ಜಾರಿಗಾಗಿ ಆಗ್ರಹಿಸಲಾಯ್ತು.
ಆನಂತರ ರಾಜ್ಯಪಾಲರಿಗೆ ಬರೆದ ಲಿಖಿತ ಮನವಿಯನ್ನು ಉಪ ತಹಶೀಲ್ದಾರ್ಅನಂತ ಚಿಪ್ಪಲಕಟ್ಟಿಯವರ ಮೂಲಕ ನೀಡಲಾಯ್ತು. ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ವಕೀಲ ಮಲ್ಲಿಕಾರ್ಜುನ್ ಅಷ್ಟೇಕರ್ ಅವರ ಮನೆಗೆ ಅಕ್ರಮವಾಗಿ ನುಗ್ಗಿ ಚಾಕುವಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿರುವುದು ಅತ್ಯಂತ ಖಂಡನೀಯ. ನ್ಯಾಯ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ವಕೀಲರುಗಳ ಮೇಲೆ ಈ ರೀತಿ ಹಲ್ಲೆಗಳು ನಡೆಯದಂತೆ ಸೂಕ್ತ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕು. ಮಲ್ಲಿಕಾರ್ಜುನ್ ಅಷ್ಟೇಕರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರುಗಳಾದ ಎ.ಎಂ.ಪಾಟೀಲ್, ಎಲ್.ಎಸ್.ಅರಸಿನಗೇರಿ, ಸದಾನಂದ ಗುಪ್ಪಿತ್, ಸುಂದರ್ ಕಾನಕತ್ರಿ, ಎಸ್.ಆರ್.ಗುನಗ, ರಾಧಾರಾಣಿ ಕೊಳಂಬೆ, ಭಾರತಿ ಉಳ್ಳಗಡ್ಡಿ, ಸಂತೋಷ್ ಹಬ್ಬು, ಮಂಜುನಾಥ್ ಮಾದರ್, ಎಸ್.ಎಲ್.ಸೋಮಣ್ಣನವರ್, ಮೊದಲಾದವರು ಉಪಸ್ಥಿತರಿದ್ದರು.