ಪ್ರಥಮ ಪೂಜಿತ ಗಣಪತಿಯ ತಲೆಯನ್ನು ಈಶ್ವರನು ತ್ರಿಶೂಲದಿಂದ ಬೇರ್ಪಡಿಸಿ ನಂತರ ಗುಜಮುಖ ಜೋಡಿಸಿದ್ದು ಪುರಣಾದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಶಿವನ ಅಂಶವಾಗಿರುವ ವೀರಭ್ರನು ಪ್ರಜಾಪತಿ ದಕ್ಷನ ತಲೆಯನ್ನು ಕತ್ತರಿಸಿ ಹೋಮಕುಂಡಕ್ಕೆ ಎಸೆದಿದ್ದು ಹಾಗೂ ಈಶ್ವರನು ಪ್ರತ್ಯಕ್ಷವಾಗಿ ಯಕ್ಷನಿಗೆ ಮೇಕೆಯ ತಲೆ ಜೋಡಿಸಿದ್ದು ಕೂಡ ಪರುಣಾದಲ್ಲಿ ಉಲ್ಲೇಖಿಸಲಾಗಿದೆ. ಇದೀಗ, ಕಲಿಯುಗದಲ್ಲೂ ಅಂತಹದ್ದೇ ಒಂದು ಪವಾಡ ನಡೆದಿದ್ದು,ವೈದ್ಯರ ತಂಡವು, ಅಪಘಾತದಲ್ಲಿ ತುಂಡಾಗಿದ್ದ ಬಾಲಕನ ತಲೆಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದೆ.
ವೈದ್ಯೋ ನಾರಾಯಣ ಹರಿ ಎಂದು ಹೇಳುತ್ತಾರೆ. ವೈದ್ಯನು ಸಾಕ್ಷಾತ್ ನಾರಾಯಣವೆಂದೂ, ರಕ್ಷಕನೆಂದೂ, ದೇವರ ಸಮಾನನೆಂದೂ ಅರ್ಥ. ಇಂತಹ ವೈದ್ಯರು ಪವಾಡವೆಂಬಂತೆ ಶಸ್ತ್ರಚಿಕಿತ್ಸೆಯನ್ನು ನಡೆಸಿ ರೋಗಿಗಳಿಗೆ ಮರುಜನ್ಮ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಸ್ರೇಲ್‌ನ ಶಸ್ತ್ರಚಿಕಿತ್ಸಕರು ಅತ್ಯಂತ ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರುಜೋಡಿಸಿದ್ದಾರೆ ಎಂದು ಜೆರುಸಲೆಮ್ ಆಸ್ಪತ್ರೆ ಬುಧವಾರ ಪ್ರಕಟಿಸಿದೆ.
ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, 12 ವರ್ಷದ ಬಾಲಕ ಸುಲೈಮಾನ್ ಹಸನ್ ಬೈಸಿಕಲ್ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ತಲೆ ತುಂಡಾಗಿತ್ತು. ಕಾರು ಅಪಘಾತದ ನಂತರ ಸುಲೈಮಾನ್ ಹಸನ್ನನ್ನು ವೆಸ್ಟ್ ಬ್ಯಾಂಕ್‌ನಿಂದ ಹದಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದ ಮೂಲಕ ಕೊಂಡೊಯ್ಯಲಾಯಿತು. ತಪಾಸಣೆ ವೇಳೆ ಬಾಲಕನ ತಲೆಬುರುಡೆಯ ಹಿಂಭಾಗದ ತಳವನ್ನು ಹಿಡಿದಿರುವ ಅಸ್ಥಿರಜ್ಜುಗಳು ಹೆಚ್ಚು ಹಾನಿಗೊಳಗಾಗಿರುವುದು ತಿಳಿದುಬಂದಿದೆ.
ಟೈಮ್ಸ್ ಆಫ್ ಇಸ್ರೇಲ್ ಜೊತೆ ಮಾತನಾಡಿದ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿದ ಮೂಳೆ ಶಸ್ತ್ರಚಿಕಿತ್ಸಕ ಡಾ.ಒಹಾದ್ ಐನಾವ್, ಬಾಲಕನನ್ನು ಉಳಿಸಲು ಹೆಚ್ಚಿನ ಸಾಮರ್ಥ್ಯ ಹಾಕಿದ್ದು, ನಮ್ಮ ಆಸ್ಪತ್ರೆಯಲ್ಲಿನ ಆಧುನಿಕ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ತಲೆಯನ್ನು ಮರು ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆ ಹಲವು ಗಂಟೆಗಳನ್ನು ತೆಗೆದುಕೊಂಡಿದೆ ಎಂದರು.
ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಬದುಕುಳಿಯುವ ಅವಕಾಶ ಶೇಕಡಾ 50 ರಷ್ಟು ಮಾತ್ರ ಇರುತ್ತದೆ. ಆದರೆ ಬಾಲಕನಲ್ಲಿ ಆಗುತ್ತಿರುವ ಚೇತರಿಕೆಯು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಶಸ್ತ್ರಚಿಕಿತ್ಸಕರು ಹೇಳಿದ್ದಾರೆ. ಈ ಶಸ್ತ್ರಚಿಕಿತ್ಸೆಯು ಕಳೆದ ತಿಂಗಳು ನಡೆದಿದೆ. ಆದರೆ ಜುಲೈವರೆಗೆ ವೈದ್ಯರು ಫಲಿತಾಂಶಗಳನ್ನು ಬಹಿರಂಗಪಡಿಸಲಿಲ್ಲ. ಆದರೆ ಇತ್ತೀಚೆಗೆ ಹಸನ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆತ ಕುತ್ತಿಗೆಗೆ ಕಟ್ಟುಪಟ್ಟಿ ಧರಿಸುತ್ತಿದ್ದು, ಚೇತರಿಕೆಯ ಮೇಲ್ವಿಚಾರಣೆ ಮುಂದುವರಿಸುವುದಾಗಿ ಆಸ್ಪತ್ರೆ ತಿಳಿಸಿದೆ.