ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಖಂಡೂ ಅವರು ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆದು ಗಮನ ಸೆಳೆದರು.
ಶಾಲೆಯಲ್ಲಿರುವ ಮೂಲಭೂತ ಸೌಕರ್ಯಗಳು, ಸುಸಜ್ಜಿತ ನವೀನ ಮಾದರಿಯ ಡಿಜಿಟಲ್ ಕಲಿಕಾ ಕೊಠಡಿಗಳನ್ನು ಹಾಗೂ ಶಾಲಾ ವಾತವರಣ ಮತ್ತು ಮಕ್ಕಳಲ್ಲಿರುವ ಶಿಸ್ತು, ಸನ್ನಡತೆಯನ್ನು ಕಂಡು ಶ್ಲಾಘನೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ವ್ಯಕ್ತಿತ್ವ ಮತ್ತು ಜೀವನಕ್ಕೆ ಶಿಕ್ಷಣ ಯಾಕೆ, ಹೇಗೆ? ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದ ಈಶ್ವರ ಖಂಡೂ ಅವರು ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ಕಲಿತ ಶಿಕ್ಷಣದಿಂದ ಜೀವನದಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿಟ್ಟು, ಆ ಗುರಿ ಯಶಸ್ಸಿಗೆ ಸತತ ಅಧ್ಯಯನಶೀಲರಾಗುವುದರ ಜೊತೆಗೆ ಪರಿಶ್ರಮಿಗಳಾಗಬೇಕು. ಆಗ ಮಾತ್ರ ಗುರಿ ಸಾಧನೆ ಸಾಧ್ಯ, ಶ್ರಮವಹಿಸಿ ಸಾಧಿಸಿದ ಸಾಧನೆಯಿಂದ ಆತ್ಮತೃಪ್ತಿಯನ್ನು ಪಡೆಯಲು ಸಾಧ್ಯವಿದೆ. ಇಲ್ಲಿಯ ಶಿಕ್ಷಣ ವ್ಯವಸ್ಥೆ, ವಾತವರಣ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದ ಆಸ್ತಿಗಳಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಚಾರ್ಯರು, ಬೋಧಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಆವರಣದಲ್ಲಿ ಸಸಿ ನೆಡುವುದರ ಮೂಲಕ ಈಶ್ವರ ಖಂಡೂ ಅವರು ವನಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ, ಪ್ರಾಚಾರ್ಯ ವಿಶ್ವನಾಥ್ ಹುಲಸದಾರ, ಸಿ.ಆರ್.ಪಿ ಲಲಿತಾ ನಾಯ್ಕ, ಹಾಗೂ ವಸತಿ ಶಾಲೆಯ ಬೋಧಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.