ನೇಪಾಳದ ಮೌಂಟ್​ ಎವರೆಸ್ಟ್​ ಬಳಿ 6 ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್​ ನಾಪತ್ತೆ

ನೇಪಾಳದ ಮೌಂಟ್ ಎವರೆಸ್ಟ್​ ಬಳಿ 6 ಜನರಿದ್ದ Helicopter ​ ನಾಪತ್ತೆಯಾಗಿದೆ. ಈ ಕುರಿತು ಅಧಿಕಾರಿ ಜ್ಞಾನೇಂದ್ರ ಭುಲ್ ಮಾಹಿತಿ ಹೆಲಿಕಾಪ್ಟರ್ ಸೋಲುಖುಂಬುವಿನಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಮೌಂಟ್ ಎವರೆಸ್ಟ್​ ಬಳಿ ಸಂಪರ್ಕ ಕಳೆದುಕೊಂಡಿದೆ. ನಾಪ್ತತೆಯಾದ ಹೆಲಿಕಾಪ್ಟರ್​ನಲ್ಲಿ ಐವರು ವಿದೇಶಿ ಪ್ರಜೆಗಳಿದ್ದರು ಎನ್ನಲಾಗುತ್ತಿದೆ. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜನರಲ್ ಮ್ಯಾನೇಜರ್ ಪ್ರತಾಪ್ ಬಾಬು ತಿವಾರಿ ಮಾತನಾಡಿ, 9ಎನ್​-ಎಎಂವಿ ಹೆಲಿಕಾಪ್ಟರ್​ ಟೇಕ್ ಆಫ್ ಆದ 15 ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಹೆಲಿಕಾಪ್ಟರ್ ಐವರು ವಿದೇಶಿ ಪ್ರವಾಸಿಗರನ್ನು ಹೊತ್ತು ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ಗೆ ವಿಹಾರ ಮಾಡಿ ಮಂಗಳವಾರ ಬೆಳಗ್ಗೆ ರಾಜಧಾನಿ ಕಠ್ಮಂಡುವಿಗೆ ಮರಳುತ್ತಿತ್ತು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನ ಹಾರಾಟದ ಮಾರ್ಗವನ್ನು ಬದಲಾಯಿಸಬೇಕಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿ ಸಾಗರ್ ಕಡೆಲ್ ತಿಳಿಸಿದ್ದಾರೆ.

ಹೆಲಿಕಾಪ್ಟರ್ ನಾಪತ್ತೆಯಾಗಿರುವ ಸಮೀಪದ ಪ್ರದೇಶಗಳಲ್ಲಿ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಾರ್ಚ್‌ನಲ್ಲಿ ನೇಪಾಳದ ಸಂಖುವಾಸಭಾದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಒಬ್ಬರು ಸಾವನ್ನಪ್ಪಿದರು ಮತ್ತು ನಾಲ್ವರು ಗಾಯಗೊಂಡಿದ್ದರು.

ಜನವರಿ 15 ರಂದು, ನೇಪಾಳದ ಪೋಖರಾ ಡೊಮೆಸ್ಟಿಕ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಮಾಡುವಾಗ ಯೇತಿ ಏರ್‌ಲೈನ್ಸ್‌ನ ವಿಮಾನವೊಂದು ಪತನಗೊಂಡಿತು, ಅದರಲ್ಲಿದ್ದ ಎಲ್ಲಾ 72 ಜನರು ಸಾವನ್ನಪ್ಪಿದ್ದರು.