ಪಾಕಿಸ್ತಾನದಲ್ಲಿ ಭಾರೀ ಮಳೆಯಾಗುತ್ತಿದ್ದು ಜೂನ್ 25 ರಿಂದ ಇಲ್ಲಿಯವರೆಗೆ 86 ಜನರು ಸಾವಿಗೀಡಾಗಿದ್ದು, 151 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮೂಲದ ARY ನ್ಯೂಸ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಉಲ್ಲೇಖಿಸಿ ವರದಿ ಮಾಡಿದೆ.ಎಆರ್ವೈ ನ್ಯೂಸ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನದಾದ್ಯಂತ ಭಾರೀ ಮಳೆಯಿಂದಾಗಿ ಆರು ಜನರು ಸಾವಿಗೀಡಾಗಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಎನ್‌ಡಿಎಂಎ ತನ್ನ ವರದಿಯಲ್ಲಿ ತಿಳಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 86 ಸಾವುಗಳು ಮತ್ತು 151 ಗಾಯಗಳು ವರದಿಯಾಗಿವೆ. ಇದರಲ್ಲಿ 16 ಮಹಿಳೆಯರು ಮತ್ತು 37 ಮಕ್ಕಳು ಸೇರಿದ್ದಾರೆ.ದೇಶಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, 97 ಮನೆಗಳಿಗೆ ಹಾನಿಯಾಗಿದೆ.
ಪಂಜಾಬ್‌ನಲ್ಲಿ ಅತಿ ಹೆಚ್ಚು ಜನರು ಸಾವನ್ನಪ್ಪಿದ್ದು, 52 ಜನರು ಸಾವಿಗೀಡಾಗಿದ್ದಾರೆ. ಏತನ್ಮಧ್ಯೆ, ಖೈಬರ್ ಪಖ್ತುಂಖ್ವಾದಲ್ಲಿ 20,ಬಲೂಚಿಸ್ತಾನದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
2023 ರಲ್ಲಿ ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹದ ಶೇಕಡಾ 72 ರಷ್ಟು ಸಾಧ್ಯತೆಗಳಿವೆ ಎಂದು ಎನ್‌ಡಿಎಂಎ ಏಪ್ರಿಲ್ ನಲ್ಲಿ ಭವಿಷ್ಯ ನುಡಿದಿತ್ತು. ತಾಪಮಾನದಲ್ಲಿ ತ್ವರಿತ ಏರಿಕೆ, ಹಿಮನದಿ ಕರಗುವಿಕೆ ಮತ್ತು ಮುಂಗಾರು ಮಳೆಯ ಆರಂಭವು ಪ್ರವಾಹಕ್ಕೆ ಕಾರಣವಾಗಬಹುದು ಎಂದು ಎನ್‌ಡಿಎಂಎ ಅಧ್ಯಕ್ಷ ಲೆಫ್ಟಿನೆಂಟ್ ಜನರಲ್ ಇನಾಮ್ ಹೈದರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಎನ್‌ಡಿಎಂಎ ಮತ್ತು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವಾಲಯವು 17 ಉಪಗ್ರಹಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದು, 36 ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಇರಿಸಲಾಗಿದೆ ಎಂದು ಹೈದರ್ ಹೇಳಿದ್ದಾರೆ. ಕಳೆದ ವರ್ಷದಂತೆ ಈಗ ಪ್ರವಾಹ ಸಂಭವಿಸಿದರೆ ಪಾಕಿಸ್ತಾನವು ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತದೆ ಎಂದಿದ್ದಾರೆ ಅವರು.
ಪಾಕಿಸ್ತಾನದ ಪಂಜಾಬ್‌ನಾದ್ಯಂತ ಮಳೆಯಾಗಿದ್ದು ಲಾಹೋರ್‌ನ ಅಜರ್ ಟೌನ್ ಮತ್ತು ಶಾಹದಾರ ಟೌನ್ ನಲ್ಲಿ ಎರಡು ಚಾವಣಿ ಕುಸಿದು ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ಶನಿವಾರ ವರದಿ ಮಾಡಿದೆ. ರಕ್ಷಣಾ ಸಂಸ್ಥೆಯ ಪ್ರಕಾರ ಯಾವುದೇ ಹೆಚ್ಚಿನ ನಾಶ ನಷ್ಟ ಬಗ್ಗೆ ವರದಿಯಾಗಿಲ್ಲ ಎಂದು ಡಾನ್ ವರದಿ ಮಾಡಿದೆ.
ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಎಂದು ವರದಿ ತಿಳಿಸಿದೆ. ಪಂಜಾಬ್‌ನ ಪರಿಹಾರ ಆಯುಕ್ತ ನಬೀಲ್ ಜಾವೇದ್ ಅವರು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿದ್ದು, ಅಲ್ಲಿ ನದಿಗಳ ಪ್ರವಾಹದ ಅಪಾಯದ ಬಗ್ಗೆ ತಿಳಿಸಲಾಗಿದೆ ಎಂದು ಎಆರ್ವೈ ನ್ಯೂಸ್ ಹೇಳಿದೆ.