ಬೆಂಗಳೂರು (ಜು.08): ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ಎನ್‌ಇಪಿ, ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಎಪಿಎಂಪಿ ತಿದ್ದುಪಡಿ ಕಾಯ್ದೆ, ನಮ್ಮ ಕ್ಲಿನಿಕ್ ಸೇರಿದಂತೆ 17ಕ್ಕೂ ಹೆಚ್ಚು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಬಜೆಟ್‌ನಲ್ಲಿ ಕೈಬಿಟ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಜಾರಿಗೊಳಿಸಿದ್ದ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯನ್ನು ಕಾಂಗ್ರೆಸ್ ಸರ್ಕಾರವು ಕೈಬಿಟ್ಟಿದೆ. ಇನ್‌ಇಪಿ ರದ್ದುಗೊಳಿಸಿ ರಾಜ್ಯದಲ್ಲಿ ಈ ಮೊದಲು ಇದ್ದ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯಪರಿಷ್ಕರಣೆಯನ್ನು ರದ್ದುಗೊಳಿಸಿದೆ.
ಇದರ ಜತೆಗೆ ರೈತರ, ಮೀನುಗಾರರ, ಟ್ಯಾಕ್ಸಿ ಚಾಲಕರು ಸೇರಿದಂತೆ ಇತರೆ ವರ್ಗದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ಸಹ ಕಾಂಗ್ರೆಸ್ ಸರ್ಕಾರವು ಸ್ಥಗಿತಗೊಳಿಸಿದೆ. ಬಿಜೆಪಿಯ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಜಿಲ್ಲೆಗೊಂದು ಗೋಶಾಲೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಗೋವುಗಳ ರಕ್ಷಣೆ ಮಾಡುವ ಸಂಬಂಧ ಜಿಲ್ಲೆಗೊಂದು ಗೋಶಾಲೆ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇನ್ನು, ರೈತರಿಗೆ ಎಪಿಎಂಸಿ ಮಾರುಕಟ್ಟೆಗಳ ಹೊರಗಡೆಯೂ ತಮ್ಮ ಉತ್ಪನ್ನ ಮಾರಾಟ ಮಾಡಲು ಅನುವು ಮಾಡಿಕೊಡುವ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡಿದೆ.
ಯಾರು ಬೇಕಾದರೂ ಕೃಷಿಭೂಮಿ ಖರೀದಿಸಲು ಅನುಕೂಲವಾಗಲು 79ಎ ಮತ್ತು 79ಬಿಗೆ ತಿದ್ದುಪಡಿ ತಂದಿದ್ದ ಕೃಷಿ ಭೂಮಿ ಮಾರಾಟ ತಿದ್ದುಪಡಿ ಕಾಯ್ದೆ ರದ್ದು ಮಾಡಲಾಗಿದೆ. ದೆಹಲಿ ಸರ್ಕಾರದ ಮಾದರಿಯಲ್ಲಿಯೇ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದ್ದ ನಮ್ಮ ಕ್ಲಿನಿಕ್ ಯೋಜನೆಯನ್ನು ಕೈಬಿಡಲಾಗಿದೆ. ರಾಜ್ಯದ ಶಾಲೆಗಳಿಗೆ ಒಂದೇ ರೂಪದ ಬಣ್ಣ ಬಳಿಯುವ ವಿವೇಕ ಶಾಲೆ ಅಭಿವೃದ್ಧಿ ಯೋಜನೆ, ಪ್ರಪ್ರಥಮವಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪುಗಳನ್ನು ರಚಿಸಿ ಸ್ವ-ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಯುವಕರನ್ನು ಪ್ರೋತ್ಸಾಹಿಸಲು ಜಾರಿಗೊಳಿಸಿದ್ದ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ರದ್ದು ಮಾಡಲಾಗಿದೆ.
ಮಹಿಳೆಯರ ಸ್ವಸಹಾಯ ಸಂಘಗಳಿಗೆ ಐದು ಲಕ್ಷ ರು. ಸಹಾಯಧನ ಒದಗಿಸುವ ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ, ಭೂ ಸಿರಿ ಯೋಜನೆಯಡಿ ರೈತರಿಗೆ 10 ಸಾವಿರ ರು. ನೀಡುವುದು, ಕೃಷಿ ಮಹಿಳೆಯರಿಗೆ ಪ್ರತಿ ತಿಂಗಳು 500 ರು. ನೀಡುವ ಶ್ರಮಶಕ್ತಿ ಯೋಜನೆಯನ್ನು ಸ್ಥಗಿತ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿವೀರ ಯೋಜನೆ ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರವು, ಯೋಜನೆಗೆ ಸೇರುವ ಎಸ್‌ಸಿ/ಎಸ್‌ಟಿ ಯುವಕರಿಗೆ ತರಬೇತಿ ನೀಡುವ ಯೋಜನೆಯನ್ನು ಸಹ ರದ್ದುಗೊಳಿಸಲಾಗಿದೆ.
ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜನನಿಧಿ ಎಂಬ ಹೊಸ ಯೋಜನೆಯನ್ನು ಬಿಜೆಪಿ ಘೋಷಣೆ ಮಾಡಿತ್ತು. ಅಲ್ಲದೇ, ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಕಲ್ಪಿಸಲು ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡುವುದು, ಅಸ್ಪೃಶ್ಯತೆ ನಿವಾರಣೆ ಮಾಡಲು ಸಂಬಂಧ ಜಾಗೃತಿ ಮೂಡಿಸಲು ವಿನಯ ಸಾಮರಸ್ಯ ಯೋಜನೆ, ಚಿನ್ನಾಭರಣ ಕುಶಲಕರ್ಮಿಗಳ ಮತ್ತು ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗಲು ಬೆಂಗಳೂರಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ ಮಾಡುವ ಬಗ್ಗೆ ಬಿಜೆಪಿ ಪ್ರಕಟಿಸಿತ್ತು. ಇವುಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಇನ್ನು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಥಗಿತಗೊಂಡಿದ್ದ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿದ್ದರು. ಆದರೆ, ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ.