ರಾಯ್‌ಪುರ್(ಜು.07) ಪ್ರಧಾನಿ ನರೇಂದ್ರ ಮೋದಿಯ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಂಬಲಿಗರಿದ್ದ ಬಸ್ ಅಪಘಾತಕ್ಕೀಡಾಗಿದೆ. ಚತ್ತೀಸಘಡದ ರಾಯ್‌ಪುರದಲ್ಲಿ ಆಯೋಜಿಸಿದ್ದ ಪ್ರಧಾನಿ ಮೋದಿ ಸಾರ್ವಜನಿಕ ಕಾರ್ಯಕ್ರಮಕ್ಕೆ ತೆರಳಲು ಬೆಂಬಲಿಗರು ಬಸ್ ಪ್ರಯಾಣ ಮಾಡಿದ್ದರು. ಆದರೆ 40 ಪ್ರಯಾಣಿಕರಿದ್ದ ಈ ಬಸ್ ಅಂಬಿಕಾಪುರದಿಂದ ರಾಯ್‌ಪುರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬಿಲಾಸಪುರದಲ್ಲಿ ನಡೆದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿಲಾಸಪುರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆನ್ನಲ್ಲೇ ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಆಘಾತ ವ್ಯಕ್ತಪಡಿಸಿದ್ದಾರೆ.
ಆಪಘಾತದಲ್ಲಿ ಮಡಿದವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಘೋಷಿಸಿದ್ದಾರೆ. ಇನ್ನು ಗಾಯಾಳುಗಳ ಖರ್ಚು ಸರ್ಕಾರ ಭರಿಸಲಿದೆ ಎಂದಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರಧಾನಿ ಮೋದಿ ಚತ್ತೀಸಘಡದ ರಾಯ್‌ಪುರದಲ್ಲಿ ಹಲವು ಅಭಿವೃದ್ಧಿ ಯೋಜನಗಳಿಗೆ ಚಾಲನೆ ನೀಡಲು ಆಗಮಿಸಿದ್ದರು. ಅಭಿವೃದ್ಧಿ ಕಾರ್ಯಕ್ರಮಗಳ ಬಳಿ ರಾಯ್‌ಪುರದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಚತ್ತೀಸಘಡದ ಹಲವು ಭಾಗಗಳಿಂದ ಬೆಂಬಲಿಗರು ಆಗಮಿಸಿದ್ದರು. ಅಂಬಿಕಾಪುರದಿಂದ ಬೆಂಬಲಿಗರು ಬಸ್ ಮೂಲಕ ಆಗಮಿಸಿದ್ದರು. ಈ ವೇಳೆ ಬಸ್ ಅಪಘಾತಕ್ಕೀಡಾಗಿದೆ.
ಘಟನೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮನ್ ಸಿಂಗ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಬೆಂಬಲಿಗರ ಬಸ್ ಅಪಘಾತಕ್ಕೀಡಾಗಿರುವುದು ತೀವ್ರ ನೋವು ತಂದಿದೆ. ಮೂವರು ನಿಧನದ ಸುದ್ದಿ ಕೇಳಿ ಮನಸ್ಸು ಕದಡಿದೆ. ಬಿಜೆಪಿ ಕುಟುಂಬದ ಮೂವರನ್ನು ಕಳೆದುಕೊಂಡ ನೋವು ಮಡುಗಟ್ಟಿದೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ. ಮೃತರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಮನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ರಾಯ್‌ಪುರದಲ್ಲಿ ಪ್ರಧಾನಿ ಮೋದಿ, 6,400 ಕೋಟಿ ರೂಪಾಯಿ ಮೌಲ್ಯದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಿದ್ದಾರೆ. ಜಬಲ್ಪುರ-ಜಗದಾಲ್ಪುರ ರಾಷ್ಟ್ರೀಯ ಹೆದ್ದಾರಿಯ ರಾಯ್‌ಪುರದಿಂದ ಕೊಡೆಬೋಡ್ ವಿಭಾಗದವರೆಗಿನ 33 ಕಿ.ಮೀ ಉದ್ದದ 4 ಪಥದ ರಸ್ತೆ, ರಾಷ್ಟ್ರೀಯ ಹೆದ್ದಾರಿ 130ರ ಬಿಲಾಸ್‌ಪುರ್‌ನಿಂದ ಅಂಬಿಕಾಪುರವರೆಗಿನ 53 ಕಿ.ಮೀ ಉದ್ದದ 4 ಪಥದ ಬಿಲಾಸ್‌ಪುರ್-ಪತ್ರಾಪಲಿ ಮಾರ್ಗ ವನ್ನು ದೇಶಕ್ಕೆ ಸಮರ್ಪಿಸಿದ್ದಾರೆ.
ರಾಯ್‌ಪುರ-ವಿಶಾಖಪಟ್ಟಣಂ ಕಾರಿಡಾರ್‌ನ ಛತ್ತೀಸ್‌ಗಢ ವಿಭಾಗದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. 750 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಂಡ 103 ಕಿ.ಮೀ ಉದ್ದದ ʻರಾಯ್‌ಪುರ-ಖರಿಯಾರ್ʼ ರಸ್ತೆ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದು ಛತ್ತೀಸ್‌ಗಢದ ಕೈಗಾರಿಕೆಗಳಿಗೆ ಬಂದರುಗಳಿಂದ ಕಲ್ಲಿದ್ದಲು, ಉಕ್ಕು, ರಸಗೊಬ್ಬರಗಳು ಮತ್ತು ಇತರ ಸರಕುಗಳ ಸಾಗಣೆಯನ್ನು ಸುಲಭಗೊಳಿಸುತ್ತದೆ. ಕಿಯೋಟಿ- ಅಂತಗಢವನ್ನು ಸಂಪರ್ಕಿಸುವ 17 ಕಿ.ಮೀ ಉದ್ದದ ಹೊಸ ರೈಲು ಮಾರ್ಗವನ್ನೂ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 290 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಹೊಸ ರೈಲು ಮಾರ್ಗವು ಭಿಲಾಯ್ ಉಕ್ಕು ಸ್ಥಾವರಕ್ಕೆ ʻದಲ್ಲಿ ರಾಜ್ಹರಾʼ ಮತ್ತು ʻರೌಘಾಟ್ʼ ಪ್ರದೇಶಗಳ ಕಬ್ಬಿಣದ ಅದಿರು ಗಣಿಗಳೊಂದಿಗೆ ಸಂಪರ್ಕವನ್ನು ಒದಗಿಸುತ್ತದೆ. ಜೊತೆಗೆ ದಟ್ಟವಾದ ಕಾಡುಗಳ ಮೂಲಕ ಹಾದುಹೋಗುವ ದಕ್ಷಿಣ ಛತ್ತೀಸ್‌ಗಢದ ದೂರದ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಕೊರ್ಬಾದಲ್ಲಿ 130 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾರ್ಷಿಕ 60 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ʻಇಂಡಿಯನ್ ಆಯಿಲ್ ಕಾರ್ಪೊರೇಷನ್ʼನ ಬಾಟ್ಲಿಂಗ್ ಘಟಕವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದಲ್ಲದೆ, ʻಆಯುಷ್ಮಾನ್ ಭಾರತ್ʼ ಅಡಿಯಲ್ಲಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್‌ಗಳ ವಿತರಣೆಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.