ಬೆಂಗಳೂರು: ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ ನ್ನು ಸಿಎಂ ಸಿದ್ಧರಾಮಯ್ಯ ಅವರು ಶುಕ್ರುವಾರ ಮಂಡಿಸಿದ್ದಾರೆ. 14ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಿದ್ಧರಾಮಯ್ಯ ಅವರು ದಾಖಲೆ ನಿರ್ಮಿಸಿದ್ದಾರೆ. ಈ ಭಾರಿಯ ಬಜೆಟ್ನಲ್ಲಿ ಕಂದಾಯ ಇಲಾಖೆಗೆ ಮಹತ್ವ ನೀಡಲಾಗಿದೆ. ಆ ಪೈಕಿ ಮಹಿಳೆಯರಿಗೆ ನೆರವಾಗುವ ದೃಷ್ಟಿಯಿಂದ ‘ಉದ್ಯಮ ಶಕ್ತಿ’ ಎಂಬ ಯೋಜನೆ ಅಡಿಯಲ್ಲಿ 100 ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಲಾಗುತ್ತಿದ್ದು, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಿಸಲ್ಪಡುತ್ತವೆ ಎಂಬುದು ವಿಶೇಷ.
ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದಲ್ಲಿ ‘ಉದ್ಯಮ ಶಕ್ತಿ ಯೋಜನೆ’ ಅಡಿಯಲ್ಲಿ 100 ಬೇರೆ ಬೇರೆ ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮತ್ತು ಅವುಗಳನ್ನು ‘ಮಹಿಳಾ ಸಹಕಾರಿ ಸ್ವಸಹಾಯ ಸಂಘ’ಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.
ಈ ‘ಉದ್ಯಮ ಶಕ್ತಿ’ ಯೋಜನೆ ನಿರ್ಮಾಣಕ್ಕೆ ಪೆಟ್ರೋಲಿಯಂ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ. ಇನ್ನು ರಾಜ್ಯ ಸರ್ಕಾರ ಪೆಟ್ರೋಲ್ ಬಂಕ್ ಸ್ಥಾಪನೆಗೆ ಭೂಮಿ ಒದಗಿಸುವುದರ ಜತೆಗೆ ತರಬೇತಿ, ಪರವಾನಗಿ ಮತ್ತು ಇತ್ತರೆ ಅಗತ್ಯಗಳನ್ನು ಒದಗಿಸಲಿದೆ.