ಪುನೀತ್ ರಾಜ್‌ಕುಮಾರ್ ಅವರು 2021ರ ಅಕ್ಟೋಬರ್ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರನ್ನು ಅಭಿಮಾನಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರ ಮರಣಾ ನಂತರ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಅನೇಕರಿಂದ ಆಗಿದೆ. ಕಾಂಗ್ರೆಸ್ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಠಾತ್ ಹೃದಯಾಘಾತ ತಡೆಯಲು ಸರ್ಕಾರ ಹೊಸ ಯೋಜನೆ ತರುತ್ತಿದ್ದು, ಪುನೀತ್ ರಾಜ್‌ಕುಮಾರ್ ಸ್ಮರಾಣರ್ಥವಾಗಿ ಈ ಕೆಲಸ ಆಗುತ್ತಿದೆ.
ಹೃದಯಘಾತ ತಡೆಗಟ್ಟಲು ಸ್ವಯಂಚಾಲಿತ ಎಲೆಕ್ಟ್ರಾನಿಕ್ ಡಿಫಿಬ್ರಿಲೇಟರ್ ಮಷಿನ್ಗಳು ಬಹಳ ಯಪಯೋಗಕಾರಿ ಆಗಿವೆ. ಹೃದಯಾಘಾತ ಆಗುವ ಸಾಧ್ಯತೆಗಳಿದ್ದರೆ ಈ ಯಂತ್ರ ಅದನ್ನು ಮೊದಲೇ ಗುರುತಿಸುತ್ತದೆ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು AED ಮಷಿನ್ಗಳನ್ನು ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿದ ನಂತರದಲ್ಲಿ ಅವರ ಹೆಸರನ್ನು ಅಜರಾಮರ ಆಗಿಸುವ ಕೆಲಸಗಳು ಸಾಕಷ್ಟು ನಡೆದಿವೆ. ಪಾರ್ಕ್ ಹಾಗೂ ರಸ್ತೆಗಳಿಗೆ ಪುನೀತ್ ಹೆಸರನ್ನು ಇಡಲಾಗುತ್ತಿದೆ. ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ನಿಂದ, ವೆಗಾಸಿಟಿ ಮಾಲ್ವರೆಗಿನ 10 ಕಿ.ಮೀ ರಸ್ತೆಗೆ ಪುನೀತ್ ಹೆಸರನ್ನು ಇಡಲಾಗಿದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಈ ಕೆಲಸ ಆಗಿತ್ತು. ಈಗ ಸಿದ್ದರಾಮಯ್ಯ ಅವರು ಕೂಡ ಪುನೀತ್ ಹೆಸರನ್ನು ಶಾಶ್ವತವಾಗಿಸಲು ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.