ಆಪರೇಷನ್ ಹಸ್ತ ಚುರುಕು, ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಸಂಚಲನ, ಮಾಜಿ ಸಿಎಂ ಯಡಿಯೂರಪ್ಪಗೆ ಆಘಾತ

ಕುಂದಗೋಳದ ಮಾಜಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಸಂಬಂಧಿ ಎಸ್‌.ಐ. ಚಿಕ್ಕನಗೌಡರ್ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಕೈ ಹಿಡಿಯುವುದಾಗಿ ಘೋಷಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತ ಚುರುಕು ಪಡೆದಿದ್ದು ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.

ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್‌.ಐ.‌ ಚಿಕ್ಕನಗೌಡರ್ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಅದರಗುಂಚಿ ಗ್ರಾಮದ ಸ್ವಗೃಹದಲ್ಲಿ ಬೆಂಬಲಿಗರ ಸಭೆ ನಡೆಸಿದ ಅವರು, ಜಗದೀಶ್ ಶೆಟ್ಟರ್ ನೇತ್ರತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಪ್ರಕಟಿಸಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಎಸ್‌.ಐ. ಚಿಕ್ಕನಗೌಡರ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತರವಾಗಿ ಸ್ಪರ್ಧಿಸಿದ್ದರು.

ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ್ ವಿರುದ್ಧ ಸೋಲನ್ನಪ್ಪಿದ್ದರು‌‌. ಈಗ ತಮ್ಮೆಲ್ಲಾ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಅದರಗುಂಚಿಯಲ್ಲಿ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಾನು ಸ್ವಾಭಿಮಾನದಿಂದ ಪಕ್ಷೇತರವಾಗಿ ಚುನಾವಣೆ ಸ್ಪರ್ಧಿಸಿದ್ದೆ. ಹಣದ ಮುಂದೆ ಸ್ವಾಭಿಮಾನ ಸೋತಿದೆ. ಕಾದು ನೋಡಿ ಕುಂದಗೋಳದಲ್ಲಿ ಮಧ್ಯಂತರ ಚುನಾವಣೆ ಆಗುತ್ತೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎನ್ನುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಂಬಂಧಿ ಆಗಿರುವ ಎಸ್‌.ಐ. ಚಿಕ್ಕನಗೌಡರ್‌ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿತ್ತು‌. ಹೀಗಾಗಿ ಬಿಜೆಪಿಗೆ ಗುಡ್‌ಬೈ ಹೇಳಿದ್ದ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಈಗ ಬಿಜೆಪಿಗೆ ಶಾಕ್ ಕೊಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಬೆಂಬಲಿಗರು ಕೂಡ ಚಿಕ್ಕನಗೌಡರ್ ನಿಲುವಿಗೆ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದು, ಧಾರವಾಡ ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆಗಲಿದ್ದಾರೆ ಅನ್ನೋ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಆಪರೇಷನ್ ಹಸ್ತಕ್ಕೆ ಕೈಹಾಕಿರುವ ಜಗದೀಶ್ ಶೆಟ್ಟರ್ ಬಿಜೆಪಿ ಅತೃಪ್ತ ಮುಖಂಡರನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದ್ದಾರೆ. ಲಿಂಗಾಯತ ಸಮಾಜದ ಎಸ್‌.ಐ. ಚಿಕ್ಕನಗೌಡರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.