ವಿದ್ಯಾರ್ಥಿಗಳಿಗಾಗಿ ಪ್ರತಿ ತಿಂಗಳು 12,000 ರೂ. ಖರ್ಚು ಮಾಡುವ ಶಿಕ್ಷಕ

ಚಿಕ್ಕಬಳ್ಳಾಪುರ: ಕರ್ನಾಟಕದ ಪ್ರತಿಯೊಂದು ಮಗುವು  ಶಿಕ್ಷಣ ಪಡೆಯಬೇಕೆಂದು‌ ರಾಜ್ಯ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಮತ್ತು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳು ದಾಖಲಾಗಲೆಂದು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಕೂಡ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಇಲ್ಲವೊಬ್ಬರ ಶಿಕ್ಷಕರ ಉದಾರತೆಯಿಂದ ಮತ್ತು ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿದೆ. ಹೌದು ಇವರು ಮಕ್ಕಳಿಗಾಗಿ ಪ್ರತಿ ತಿಂಗಳು 12000 ರೂ. ಖರ್ಚು ಮಾಡುತ್ತಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೌಮ್ಸ್​ ಆಫ್​​ ಇಂಡಿಯಾ ವರದಿ ಮಾಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಅಡ್ಡಗಲ್‌ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರ ಶ್ರಮದಿಂದ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಮೂರು ವರ್ಷಗಳ ಹಿಂದೆ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದರು. ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಶೆಟ್ಟಿಗೆರೆ, ಗೊರಮಿಡ್ಲಹಳ್ಳಿ ಸೇರಿದಂತೆ ಸುಮಾರು ಏಳು ಗ್ರಾಮಗಳಿಂದ ಅಡ್ಡಗಲ್‌ನ ಸರ್ಕಾರಿ ಪ್ರೌಢ ಶಾಲೆಗೆ ಬರುತ್ತಿರಲಿಲ್ಲ.

ಮಕ್ಕಳು ಶಾಲೆಗೆ ಯಾಕೆ ಬರುತ್ತಿಲ್ಲವೆಂದು ಸಮೀಕ್ಷೆ ನಡೆಸಿದ ಶಿಕ್ಷಕರಿಗೆ ತಿಳಿದಿದ್ದು, ಈ ಗ್ರಾಮಗಳಿಗೆ ಸರಿಯಾದ ಸಾರಿಗೆ ಸೌಲಭ್ಯವಿಲ್ಲದ ಕಾರಣ ಹೆಚ್ಚಿನ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲವೆಂದು. ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆ ಆರಂಭದ ಸಮಯದಲ್ಲಿ, ಶಿಕ್ಷಕರು‌ ಈ ಗ್ರಾಮಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರನ್ನು ಒತ್ತಾಯಿಸಿದರು. ಮತ್ತು ಸರಿಯಾದ ಸಾರಿಗೆ ಸೌಲಭ್ಯವನ್ನು ಒದಗಿಸುವ ಭರವಸೆ ನೀಡಿದರು.

ನೀಡಿದ ಭರವಸೆಯಂತೆ ಶಾಲೆಯ ಗಣಿತ ಶಿಕ್ಷಕ ಮೊದಲು ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಹೋಗಲು ಮತ್ತು ಮರಳಿ ಮನೆಗೆ ಬಿಡಲು ಆಟೋರಿಕ್ಷಾ ವ್ಯವಸ್ಥೆ ಮಾಡಿದರು. ಇದರಿಂದ ಶಾಲೆಯಲ್ಲಿ ದಾಖಲಾತಿ ಹೆಚ್ಚಾಯಿತು. ಮಕ್ಕಳ ಸಂಖ್ಯೆ ಏರುತ್ತಾ ಸಾಗಿತು. ಮಕ್ಕಳ ಹೆಚ್ಚಾದ ನಂತರ, ಅವರು ಮಕ್ಕಳನ್ನು ಕರೆದೊಯ್ಯಲು ಟೆಂಪೋವೊಂದನ್ನು ಬಾಡಿಗೆ ಪಡೆದರು. ಈ ಟೆಂಪೊಗೆ ಪ್ರತಿ ತಿಂಗಳು 12000 ರೂ. ಬಾಡಿಗೆ ನೀಡುತ್ತಿದ್ದಾರೆ. ಮೂರು ವರ್ಷಗಳ ನಂತರ ಇದೀಗ ಶಾಲೆಯ ಪಟ್ಟಿಯಲ್ಲಿ 132 ವಿದ್ಯಾರ್ಥಿಗಳು ಇದ್ದಾರೆ. ಹೀಗೆ ಶಿಕ್ಷಕರೊಬ್ಬರು ನಿಸ್ವಾರ್ಥ ಕಾರ್ಯದಿಂದ ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.