ಅಂಕೋಲಾ: ಬಿರುಸಿನ ಮಳೆ; ಹಲವಡೆ ಜಲಾವೃತ.

ಅಂಕೋಲಾ: ತಾಲೂಕಿನಲ್ಲಿ ಗುರುವಾರವು ವರುಣನ ಆರ್ಭಟ ಮುಂದುವರೆದಿದ್ದು ಮುಂಜಾನೆಯಿಂದ ಸಂಜೆಯವರೆಗೆ ಬಿರುಸಿನಿಂದ ಮಳೆ ಸುರಿದಿದೆ. ಬುಧವಾರ ಮಳೆಯೊಂದಿಗೆ ಮುನಿಸಿಕೊಂಡತ್ತಿದ್ದ ಗಾಳಿಯು ತನ್ನ ಪ್ರತಾಪ ತೋರಿರಲಿಲ್ಲ. ಗುರುವಾರ ಮಳೆಯೊಂದಿಗೆ ಗಾಳಿಯೂ ಅಬ್ಬರಿಸಿತು. ಇದೇ ರೀತಿ ಗಾಳಿ ಮಳೆ ಮುಂದುವರೆದರೆ ಪ್ರವಾಹ ಸ್ಥಿತಿ ಎದುರಾಗಬಹುದು ಎನ್ನುವ ಸೂಚನೆ ನೀಡಿದಂತಿತ್ತು.
ಬುಧವಾರ ಸಂಜೆ ವರುಣನ ಅಬ್ಬರ ತುಸು ಕಡಿಮೆಯಾದ ಪರಿಣಾಮ ತಾಲೂಕಿನಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ. ಗುರುವಾರ ಮುಂಜಾನೆ ಬಿರುಸಿನ ಮಳೆಯಾದ ಪರಿಣಾಮ ಜಿಲ್ಲಾ ಆಡಳಿತ ಮತ್ತು ತಾಲೂಕಾಡಳಿತದ ನಿರ್ಣಯದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ದೂರದ ಗ್ರಾಮೀಣ ಪ್ರದೇಶದಿಂದ ಮುಂಜಾನೆಯೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಬಂದಿದ್ದರು. ವಿದ್ಯುತ್ ಸಂಪರ್ಕ ಕಡಿತ ಮತ್ತು ನೆಟ್ವರ್ಕ್ ಸಮಸ್ಯೆಯಿಂದಾಗಿ ರಜೆ ಘೋಷಣೆಯಾಗಿದ್ದು ತಿಳಿಯದೆ ನೆನೆಯುತ್ತಲೇ ಬಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ರಜೆ ಎನ್ನುವ ವಿಷಯವನ್ನು ಮನದಟ್ಟು ಮಾಡಿಕೊಂಡು ವಿಷಾದ ಮತ್ತು ಸಂತೋಷ ವ್ಯಕ್ತಪಡಿಸಿ ಮನೆಗೆ ತೆರಳಿದರು.
ಬುಧವಾರದ ಮಳೆಗೆ ಗಂಗಾವಳಿ ನೀರಿನ ಮಟ್ಟದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದರಿಂದ ಮತ್ತು ನೀರು ಕೆಂಪು ಮಣ್ಣಿನ ಬಣ್ಣಕ್ಕೆ ತಿರುಗಿದ ಪರಿಣಾಮ ಸಾಂಪ್ರದಾಯಿಕ ಮೀನುಗಾರರು ಮತ್ತೆ ಬೇಟೆ ಆರಂಭಿಸಿದ್ದರು. ಬುಧವಾರ ಮಧ್ಯರಾತ್ರಿ ಬಲೆಗೆ ಹೆಚ್ಚಿನ ಪ್ರಮಾಣದ ಮೀನು ಸಿಕ್ಕಿರುವುದನ್ನು ಖುಷಿಯಿಂದಲೇ ಸಂಭ್ರಮಿಸಿದರೆ ಗುರುವಾರದ ಗಾಳಿ ಮಳೆ ಮೀನುಗಾರರ ಸಂಭ್ರಮವನ್ನು ಕಿತ್ತುಕೊಂಡಂತಿತ್ತು.
ಪುರಸಭೆ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿ ಹೂಳೆತ್ತುವ ಕಾರ್ಯವನ್ನು ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರ ಪರಿಣಾಮ ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗುವಿಕೆ ಕಡಿಮೆಯಾಗಿತ್ತು. ಗುರುವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಲಾವೃತಗೊಂಡಿರುವ ಪ್ರದೇಶದಲ್ಲಿನ ನೀರು ತೆರವುಗೊಳಿಸಲು ಶ್ರಮವಹಿಸಿದರು. ಪಟ್ಟಣದ ಗೋಖಲೆ ಸೆಂಟೇನರಿ ಕಾಲೇಜಿನ ಬಳಿ ಹಿಂದಿನ ವರ್ಷ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡ ಪರಿಣಾಮ ಈ ಬಾರಿ ಐ ಆರ್ ಬಿ ಅಧಿಕಾರಿಗಳಿಗೆ ಪುರಸಭೆಯವರು ಅಗತ್ಯಾಕ್ರಮ ವಹಿಸುವಂತೆ ಸೂಚನೆ ನೀಡಿದ್ದರು.
ಬೆಳಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಂದುಮಠದಲ್ಲಿನ ಗದ್ದೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಇಲ್ಲಿನ ಸೇತುವೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಹರಿಯುವ ನೀರನ್ನು ತಡೆಗಟ್ಟುವ ಸಾಧ್ಯತೆ ಹೆಚ್ಚಾಗಿದ್ದು ಹಿಂದಿನ ಅವಘಡ ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಬುಧವಾರದ ಮಳೆಗೆ ತಾಲೂಕಿನ ಸುಂಕಸಾಳ ಮತ್ತು ಬೇಲೆಕೇರಿ ವ್ಯಾಪ್ತಿಯ ಎರಡು ಪಕ್ಕಾ ಮತ್ತು ಮೂರು ಕಚ್ಚಾ ಮನೆಗಳು ಸೇರಿದಂತೆ ಒಟ್ಟು ಐದು ಮನೆಗಳಿಗೆ ಹಾನಿ ಉಂಟಾಗಿದೆ. 170000 ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮಳೆ ಇದೇ ರೀತಿಯಾಗಿ ಮುಂದುವರೆದರೆ ಇನ್ನಷ್ಟು ಗ್ರಾಮಗಳ ಜನವಸತಿ ಪ್ರದೇಶಗಳು ಜಲಾವೃತಗೊಳ್ಳಲಿವೆ. ನೆರೆನಿರ್ವಹಣೆಗೆ ಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳುವಿಕೆ ಹಿಂದಿನ ವರ್ಷಕ್ಕಿಂತ ನಿಧಾನಗತಿಯಲ್ಲಿ ಸಾಗುತ್ತಿದ್ದು ತಾಲೂಕು ಆಡಳಿತ ಸೂಕ್ತ ಸ್ಪಂದನೆ ನೀಡಬೇಕಿದೆ