ತುಮಕೂರು: ನಗರದ ಗುಬ್ಬಿ ಗೇಟ್ ಬಳಿ ಇರುವ ಕೇಸರಿ ಟೆಕ್ಸ್ ಗಾರ್ಮೆಂಟ್ಸ್ ಕಂಪನಿಯು ಬಡ ಕಾರ್ಮಿಕರು, ವಯಸ್ಸಾದವರು, ಅಂಗವಿಕಲರನ್ನೂ ದುಡಿಸಿಕೊಂಡು ಸಂಬಳ ನೀಡದೆ ವಂಚಿಸಿರುವ ಘಟನೆ ನಡೆದಿದೆ. ಮೂರು ತಿಂಗಳುಗಳಿಂದ ಸಂಬಳ ನೀಡದೇ ಸತಾಯಿಸುತ್ತಿರುವ ಕಂಪನಿ ವಿರುದ್ದ ರೊಚ್ಚಿಗೆದ್ದ ನೌಕರರು ಇಂದು(ಜು.6) ಕಂಪನಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪ್ರಕಾಶ್ ಎಂಬುವವವರಿಗೆ ಸೇರಿರುವ ಗಾರ್ಮೆಂಟ್ಸ್ ಕಂಪನಿ ಇದಾಗಿದ್ದು, ಸಂಬಳ ನೀಡದ ಕಂಪನಿ ವಿರುದ್ಧ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲದ ಹಿನ್ನಲೆ ನೌಕರರೇ ಹೋರಾಟಕ್ಕೆ ಇಳಿದಿದ್ದಾರೆ.
ಸುಮಾರು 130ರಿಂದ 150 ಮಂದಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಕಂಪನಿ ಇದಾಗಿದೆ. ಆದ್ರೆ, ಕಳೆದ ಮೂರು ತಿಂಗಳಿನಿಂದ ನೌಕರರಿಗೆ ಸಂಬಳ ನೀಡಿಲ್ಲ. ಒಬ್ಬೊಬ್ಬರಿಗೆ ಅಂದಾಜು 40ರಿಂದ 50 ಸಾವಿರ ರೂಪಾಯಿ ಸಂಬಳ ಬಾಕಿ ಇರಿಸಿಕೊಂಡಿದೆ. ಈ ಕುರಿತು ಕೇಳಿದಾಗ ‘ನನ್ನನ್ನ ನಂಬಿ ನಿಮ್ಮ ಸಂಬಳ ಕೊಟ್ಟೇ ಕೊಡುತ್ತೇನೆ ಎಂದು ಮಾಲೀಕ ಪ್ರಕಾಶ್ ಹೇಳುತ್ತಿದ್ದನಂತೆ. ಮಾಲೀಕನನ್ನ ನಂಬಿ ಕೆಲಸ ಮಾಡಿದವರಿಗೆ ಇದೀಗ ಪಂಗನಾಮ ಹಾಕಿದ್ದು, ಈಗ ಸಂಬಳವನ್ನೂ ನೀಡದೇ, ಫೋನ್ ಕೂಡ ರಿಸೀವ್ ಮಾಡದೇ ತಲೆ ಮರೆಸಿಕೊಂಡಿದ್ದಾನೆ.
ಇನ್ನು ಈ ಕುರಿತು ಕಾರ್ಮಿಕ ಇಲಾಖೆ ಸೇರಿದಂತೆ ಪೊಲೀಸ್ ಠಾಣೆಗೂ ದೂರು ನೀಡಿದ್ರೂ, ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ಕಾರ್ಮಿಕರು ಅಳಲನ್ನ ತೋಡಿಕೊಳ್ಳುತ್ತಿದ್ದಾರೆ. ಹೌದು ದೂರು ನೀಡಲು ಹೋದರೆ, ತಿಲಕ್ ಪಾರ್ಕ್ ಪೊಲೀಸರು ತೆಗೆದುಕೊಂಡಿಲ್ಲ. ಬಳಿಕ ಮೂರ್ನಾಲ್ಕು ದಿನ ಅಲೆದ ಮೇಲೆ ಸದ್ಯ ಕಾಟಾಚಾರಕ್ಕೆ ಪೊಲೀಸರು ದೂರು ಸ್ವೀಕರಿಸಿದ್ದಾರಂತೆ. ಈ ಕುರಿತು ಕೇಳಿದರೇ ಇನ್ನೂ ಪ್ರಕಾಶ್ ಫೋನ್ ರಿಸೀವ್ ಮಾಡುತ್ತಿಲ್ಲ. ನಾವೇನು ಮಾಡೋಣವೆಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರಂತೆ.