ಇಟ್ಟಿಗೆ ಕೊಳ್ಳೋ ನೆಪದಲ್ಲಿ ಕರೆಸಿ ಕಾರ್ಖಾನೆ ಮಾಲೀಕನ ಅಪಹರಣ – 5 ಕೋಟಿಗೆ ಬೇಡಿಕೆಯಿಟ್ಟ ದುಷ್ಕರ್ಮಿಗಳು

ಕೋಲಾರ: ಇಟ್ಟಿಗೆ ಕೊಳ್ಳುವ ನೆಪದಲ್ಲಿ ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಿ ಬಿಡುಗಡೆಗೆ 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾಲೂರು ಮಾರುತಿನಗರ ನಿವಾಸಿ ಬಾಬು ಕಿಡ್ನಾಪ್ ಆಗಿರುವ ಉದ್ಯಮಿ.

ಮಾಲೂರು ತಾಲೂಕಿನ ಹೆಡಗಿನಬೆಲೆ ಬಳಿ ಇರುವ ಇಟ್ಟಿಗೆ ಕಾರ್ಖಾನೆ ಬಳಿ ಇಟ್ಟಿಗೆ ಬೇಕು ಎಂದು ಕರೆಯಿಸಿಕೊಂಡಿರುವ ದುಷ್ಕರ್ಮಿಗಳು ಬುಧವಾರ ಕಿಡ್ನಾಪ್ ಮಾಡಿದ್ದಾರೆ. ಬಾಬು ಅವರಿಗೆ ಸೇರಿದ ವಾಸವಿ ಇಟ್ಟಿಗೆ ಕಾರ್ಖಾನೆ ಬಳಿ ಬರುವಂತೆ ತಿಳಿಸಿರುವ ಆರೋಪಿಗಳು ಬಳಿಕ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಬಾಬು ಕುಟುಂಬಸ್ಥರಿಗೆ ಕರೆ ಮಾಡಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾಲೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ದುಷ್ಕರ್ಮಿಗಳ ಬೆನ್ನತ್ತಿದ್ದಾರೆ. ಪೊಲೀಸರು 3 ತಂಡಗಳ ರಚನೆ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಹರಣಕಾರರ ಜಾಡು ಹಿಡಿಯಲು ಪೊಲೀಸರು ತೀವ್ರ ಶೋಧಕಾರ್ಯ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

ಕಿಡ್ನಾಪ್ ಆಗಿರುವ ಬಾಬು ಮನೆಯಲ್ಲಿ ಸಂಕಷ್ಟಗಳ ಸರಮಾಲೆ ಎದುರಾಗಿದ್ದು, ಬಾಬು ಪತ್ನಿಗೆ ಕಾಲು ಆಪರೇಷನ್ ಆಗಿ ನಡೆಯಲಾರದ ಪರಿಸ್ಥಿತಿ ಇದೆ. ಇತ್ತ ಮಗ ಮಂಜುನಾಥ್ ಅವರಿಗೆ ಪೆರಾಲಿಸಿಸ್ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನಡುವೆ ದುಷ್ಕರ್ಮಿಗಳು ಪೋನ್ ಕರೆ ಮಾಡಿ ಹಣದ ಬೇಡಿಕೆ ಬಂದಿರುವುದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಬಾಬು ಮನೆಯಲ್ಲಿ ಆತಂಕದ ಛಾಯೆ ಎದುರಾಗಿದ್ದು, ಪತ್ನಿ ವರಲಕ್ಷ್ಮಿ ಕುಟುಂಬದ ಸಂಕಷ್ಟ ನೆನೆದು ಕಣ್ಣೀರು ಹಾಕಿದ್ದಾರೆ. ಪತಿಯನ್ನು ಸುರಕ್ಷಿತವಾಗಿ ಕರೆತರುವಂತೆ ಮಾಲೂರು ಪೊಲೀಸರಿಗೆ ವರಲಕ್ಷ್ಮಿ ಮನವಿ ಮಾಡಿದ್ದಾರೆ.