ಬಾರದ ಮಳೆ: ಬರಕ್ಕೆ ಬೆದರಿ ಗುಳೆ ಹೊರಟ ಗದಗ ರೈತರು!

ಮುಂಡರಗಿ (ಜು.6) :  ಮಳೆ ಕೊರತೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿತ್ಯ ಮತ್ತೊಬ್ಬರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಹೋಗುವವರಿಗೆ ಕೆಲಸವಿಲ್ಲದಂತಾಗಿದೆ. ಬರಗಾಲ ಆವರಿಸುವ ಭೀತಿಯಲ್ಲಿ ಜನತೆ ಗುಳೆ ಹೋಗುತ್ತಿದ್ದಾರೆ.

ತಾಲೂಕಿನ ಮುರುಡಿತಾಂಡಾ, ಕಕ್ಕೂರುತಾಂಡಾ, ವಿರುಪಾಪುರತಾಂಡಾ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಜನತೆ ತಮ್ಮ ತುತ್ತಿನ ಚೀಲಗಳನ್ನು ತಿಂಬಿಸಿಕೊಳ್ಳುವುದಕ್ಕಾಗಿ ಗೋವಾ, ಮಂಗಳೂರು, ಉಡುಪಿ, ಬೆಂಗಳೂರಿನತ್ತ ಗುಳೆ ಹೋಗುತ್ತಿದ್ದಾರೆ.

ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿತ ತಾಲೂಕು ಎನ್ನುವ ಹಣೆಪಟ್ಟಿಕಟ್ಟಿಕೊಂಡಿರುವ ಹಾಗೂ ಜಿಲ್ಲೆಯಲ್ಲಿಯೇ ಅತಿಹೆಚ್ಚು ಬರಗಾಲ ಅನುಭವಿಸುವ ತಾಲೂಕೆಂದು ಕುಖ್ಯಾತಿ ಪಡೆದ ಮುಂಡರಗಿ ತಾಲೂಕಿಗೆ ಇದೀಗ ಮತ್ತೊಮ್ಮೆ ಬರದ ಛಾಯೆ ಎದುರಾಗಿದೆ.

ಮಳೆ ಕೊರತೆ:

ಪ್ರಸಕ್ತ ವರ್ಷ ತಾಲೂಕಿನಲ್ಲಿ ವಾಡಿಕೆಯಷ್ಟುಮುಂಗಾರು ಮಳೆ ಆಗದೇ ಇರುವುದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿಲ್ಲ. ಜನವರಿಯಿಂದ ಜೂನ್‌ವರೆಗೆ ತಾಲೂಕಿನಲ್ಲಿ 173 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 111 ಮಿ.ಮೀ. ಮಾತ್ರ ಮಳೆಯಾಗಿದೆ. ಒಟ್ಟು 62 ಮಿ.ಮೀ. ಮಳೆ ಕೊರತೆಯಾಗಿದೆ.

ತಾಲೂಕಿನಲ್ಲಿ ಎಲ್ಲಿ ನೋಡಿದರಲ್ಲಿ ಬರೀ ಖಾಲಿ ಭೂಮಿಗಳೇ ಕಾಣಸಿಗುತ್ತಿವೆ. ರೈತರು ಬಿತ್ತನೆ ಮಾಡುವುದಕ್ಕಾಗಿ ತಮ್ಮ ಜಮೀನುಗಳನ್ನು ಸಜ್ಜುಗೊಳಿಸಿಕೊಂಡು ಬೀಜ, ಗೊಬ್ಬರ ತಯಾರಿ ಮಾಡಿಕೊಂಡು ಕಾಯುತ್ತಾ ಕುಳಿತಿದ್ದಾರೆ. ಉತ್ತಮವಾಗಿ ಮಳೆಯಾಗದ ಕಾರಣ ಬಿತ್ತನೆ ಮಾಡದೇ ಹಾಗೆ ಬಿಟ್ಟಿದ್ದಾರೆ.

ಮುಂಗಾರು ಮಳೆ ಪ್ರಾರಂಭವಾಗಿ ಈಗಾಗಲೇ ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ಸೇರಿದಂತೆ ಆರು ಮಳೆಗಳು ಸದ್ದಿಲ್ಲದೇ ಸರಿದು ಹೋಗಿವೆ. ಏಳನೇ ಮಳೆ ಪ್ರಾರಂಭವಾಗಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಾವರಿ ಜಮೀನುಗಳನ್ನು ಹೊರತು ಪಡಿಸಿ, ಒಣ ಬೇಸಾಯದಲ್ಲಿ ಕೃಷಿ ಮಾಡುವವರು ಮಳೆಗಾಗಿ ಮುಗಿಲಿನತ್ತ ಮುಖ ಮಾಡಿ ಇಂದು ಬರಬಹುದು, ನಾಳೆ ಬರಬಹುದೆಂದು ಕಾದು ಕುಳಿತಿದ್ದಾರೆ. ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿತ್ತಾದರೂ ನಮ್ಮಲ್ಲಿ ಆಗದಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಮಳೆಯಾಗದೇ ಇರುವುದರಿಂದ ವರ್ಷಪೂರ್ತಿ ದನ-ಕರುಗಳಿಗೆ ತಿನ್ನಿಸಲು ಹೊಟ್ಟು, ಮೇವಿನ ಕೊರತೆ ಕಾಡಲು ಆರಂಭಿಸಿದೆ.

ಆದರೆ, ಸರ್ಕಾರದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲವರು ಕಾರ್ಯ ನಿರ್ವಹಿಸುತ್ತಿರುವುದು ಸಮಾಧಾನ ತಂದಿದೆ.

ಬರಗಾಲಪೀಡಿತ ತಾಲೂಕಾಗಿ ಘೋಷಿಸಿ

ಮುಂಡರಗಿ ತಾಲೂಕಿನಲ್ಲಿ 47,620 ಹೆಕ್ಟೇರ್‌ ಬಿತ್ತನೆ ಪ್ರದೇಶದ ಗುರಿ ಹೊಂದಲಾಗಿತ್ತು. ಆದರೆ ಅದರಲ್ಲಿ 22,222 ಹೆಕ್ಟೇರ್‌ (ಶೇ.46) ಪ್ರದೇಶದಲ್ಲಿ ಮಾತ್ರ ಬಿತ್ತನೆæಯಾಗಿದ್ದು, ಇನ್ನೂ ಶೇ.55ರಷ್ಟುಬಿತ್ತನೆಯಾಗಬೇಕಾಗಿದೆ. ಸರ್ಕಾರ ತಾಲೂಕನ್ನು ಸಂಪೂರ್ಣವಾಗಿ ಬರಗಾಲ ಪೀಡಿತ ತಾಲೂಕೆಂದು ಘೋಷಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಆಗ್ರಹಿಸಿದರು.