ಮಂಡ್ಯ: ರಾಜ್ಯದಲ್ಲಿ ಸಕ್ಕರೆನಾಡು ಎಂದೇ ಪ್ರಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಮೈಶುಗರ್ ಕಾರ್ಖಾನೆ. ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ ಯಲ್ಲಿ ಕಬ್ಬು ಅರೆಯುವಿಕೆ ಆರಂಭವಾಗಿದೆ. ಪ್ರಸಕ್ತ ವರ್ಷ ಐದು ಲಕ್ಷ ಟನ್ ಕಬ್ಬು ಅರಿಯುವ ಗುರಿ ಇಡಲಾಗಿದೆ. ಇನ್ನು ಕಾರ್ಖಾನೆಯಲ್ಲಿ ಕಬ್ಬು ಅರಿಯುವಿಕೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಕ್ಕರೆ ಇಲಾಖೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಶಾಸಕರಾದ ರವಿಕುಮಾರ್ ಗೌಡ, ಬಂಡಿಸಿದ್ದೇಗೌಡ ಭಾಗಿಯಾಗಿದ್ದರು.
ಯಂತ್ರೋಪಕರಣಗಳು ಕೆಟ್ಟ ಹಿನ್ನೆಲೆ 4 ವರ್ಷಗಳಿಂದ ಮೈಶುಗರ್ ಕಾರ್ಖಾನೆ ಮುಚ್ಚಿತ್ತು. ಹೀಗಾಗಿ ಯಂತ್ರೋಪಕರಣಗಳನ್ನು ಸರಿಪಡಿಸಬೇಕು, ಕಾರ್ಖಾನೆಯನ್ನು ಪುನರಾರಂಭಿಸಬೇಕೆಂದು ಸಾಕಷ್ಟು ಹೋರಾಟಗಳು ನಡೆದಿದ್ದವು.
ಹೋರಾಟಕ್ಕೆ ಮಣಿದು ಕಾರ್ಖಾನೆ ಪುನರಾರಂಭಕ್ಕೆ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಕಳೆದ ವರ್ಷ ಜಿಲ್ಲೆಯ ಇತರ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದಾಗ, ಮೈಶುಗರ್‌ನಲ್ಲಿ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಶುರುವಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ 50 ಕೋಟಿ ಅನುದಾನ ನೀಡಿತ್ತು.
ಹೀಗಾಗಿ ಕಳೆದ ತಿಂಗಳು ಜೂನ್ನಲ್ಲಿ ಮುಹೂರ್ತ ಫಿಕ್ಸ್ ಆಗಿ ಮೈಶುಗರ್ ಕಾರ್ಖನೆಯಲ್ಲಿ ಪೂಜೆ, ಹೋಮ-ಹವನ ನಡೆದು ಬಳಿಕ ಬಾಯ್ಲರ್ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದ್ದರು. ಇದೀಗ ಕಬ್ಬು ಅರಿಯುವಿಕೆಗೆ ಚಾಲನೆ ದೊರೆತಿದ್ದು ಮಂಡ್ಯ ಜನರಲ್ಲಿ ಸಂತಸ ಮನೆ ಮಾಡಿದೆ.
ಅಂಬರೀಶ್ ಅವರ ಕನಸು ಇದಾಗಿತ್ತು
ಕಾರ್ಖಾನೆಗೆ ಸಾಂಕೇತಿವಾಗಿ ಚಾಲನೆ ದೊರೆತ ನಂತರ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ ಇಂದು ಆಗುತ್ತಿರುವ ಖುಷಿ ಎಂದೂ ಆಗಿಲ್ಲ ಎಂದಿದ್ದರು. ಅಲ್ಲದೇ ಅಂಬರೀಷ್ ಅವರ ಕನಸು ಇದಾಗಿತ್ತು. ಎಷ್ಟೋ ವರ್ಷಗಳ ಹೋರಾಟದ ಫಲವಿದು. ಮಂಡ್ಯ ಜಿಲ್ಲೆಯ ರೈತರಿಗೆ ಐತಿಹಾಸಿಕ ಹಾಗೂ ಸಂಭ್ರಮದ ದಿನ ಇದು ಎಂದಿದ್ದರು.