25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವರ್ಗಾವಣೆ, ಕಾಂಗ್ರೆಸ್​ ಶಾಸಕನ ಪತ್ರ ವೈರಲ್

ಕೊಪ್ಪಳ: ಮಾಜಿ ಮುಖ್ಯಮಂತ್ರಿ  ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ಸರ್ಕಾರದ ವಿರುದ್ಧ ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಈ ಸಂಬಂಧ ದಿನಕ್ಕೊಂದು ಸ್ಫೋಟಕ ಹೇಳಿಕೆ ಕೊಡುತ್ತಿದ್ದಾರೆ. ಮೊನ್ನೆ ದಾಖಲೆ ಕೊಡುತ್ತೇನೆ ಅಂದಿದ್ದ ಕುಮಾರಸ್ವಾಮಿ, ಈಗ ಪೆನ್​ಡ್ರೈವ್ ಬಾಂಬ್ ಸ್ಫೋಟಿಸಿದ್ದಾರೆ. ಈ  ಬಗ್ಗೆ ಕಾಂಗ್ರೆಸ್ ಮತ್ತು ಹೆಚ್​ ಕುಮಾರಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪದ ಸಮರ ತಾರಕಕ್ಕೇರಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ್ ರಾಯರಡ್ಡಿ ಅವರು 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಕೈಹಾಕಿದ್ದಾರೆ. ಈ ಬಗ್ಗೆ ವರ್ಗಾವಣೆ ಮಾಡಿ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶ್​ ಕುಮಾರ್​ಗೆ ಬರೆದಿರುವ ಪತ್ರ ವೈರಲ್ ಆಗಿದೆ.

ಸಾಮೂಹಿಕ ಟ್ರಾನ್ಸ್​ಫರ್​ ಮಾಡುವಂತೆ ಬಳ್ಳಾರಿ ವಲಯದ ಐಜಿಪಿ ಲೋಕೇಶ್​ ಕುಮಾರ್​ ಅವರಿಗೆ ಪತ್ರ ಮುಖೇನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಬಸವರಾಜ್ ರಾಯರಡ್ಡಿ ಒತ್ತಾಯಿಸಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಹೆಸರು, ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ನಿರ್ದಿಷ್ಟ ಸ್ಥಳವನ್ನು ಪತ್ರದಲ್ಲಿ ನಮೂದಿಸಲಾಗಿದೆ.

ಇನ್ನು ರಾಯರೆಡ್ಡಿ ವರ್ಗಾವಣೆ ರಾಜಕೀಯಕ್ಕೆ ಬಿಜೆಪಿಗರ ಕಿಡಿಕಾರಿದ್ದಾರೆ. ತಮಗೆ ಬೇಕಾದವರಿಗೆ ವರ್ಗಾವಣೆ ಮಾಡಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಬಸವರಾಜ್ ರಾಯರಡ್ಡಿಯ ಕಳುಹಿಸಿದ ವರ್ಗಾವಣೆ ಪಟ್ಟಿಯನ್ನು ಬಿಜೆಪಿಗರು ವೈರಲ್ ಮಾಡಿದ್ದಾರೆ.

ಇನ್ನೊಂದೆಡೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಪೆನ್​ಡ್ರೈವ್ ಬಾಂಬ್ ಸಿಡಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಎಬ್ಬಿಸಿದೆ. ಅದರಲ್ಲೂ ವರ್ಗಾವಣೆಗೆ ವೈಎಸ್​ಟಿ (ಯತೀಂದ್ರ ಸಿದ್ದರಾಮಯ್ಯ ಟಾಕ್ಸ್​) ಕಲೆಕ್ಟ್​ ಮಾಡುತ್ತಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.