ಸೆಂಥಿಲ್ ಬಾಲಾಜಿ ಬಿಡುಗಡೆ ಕೋರಿ ಅರ್ಜಿ, ಮದ್ರಾಸ್ ಹೈಕೋರ್ಟ್​ನಿಂದ ವಿಭಜಿತ ತೀರ್ಪು

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿರುವ ತಮಿಳುನಾಡು ಸಚಿವ ಅವರನ್ನು ಸೆಂಥಿಲ್ ಬಾಲಾಜಿ ಬಿಡುಗಡೆ ಮಾಡಲು ಆದೇಶಿಸಬಹುದೇ ಎಂಬ ಪ್ರಶ್ನೆಗೆ ಮದ್ರಾಸ್ ಹೈಕೋರ್ಟ್​ನ ವಿಭಾಗೀಯ ಪೀಠ ಮಂಗಳವಾರ ವಿಭಜಿತ ತೀರ್ಪು ಪ್ರಕಟಿಸಿದೆ.

ಇದೀಗ ಈ ಪ್ರಕರಣವನ್ನು ಹೈಕೋರ್ಟ್‌ನ ವಿಸ್ತೃತ ಪೀಠ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರು ಇಂದು ವಿಭಜಿತ ತೀರ್ಪು ನೀಡಿದರು. ನ್ಯಾಯಮೂರ್ತಿ ನಿಶಾ ಬಾನು ಅವರು ಬಾಲಾಜಿ ಬಿಡುಗಡೆಗಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಮನವಿಯನ್ನು ಸಮರ್ಥನೀಯವಾಗಿದೆ ಮತ್ತು ಅನುಮತಿಸಬೇಕು ಎಂದು ತೀರ್ಮಾನಿಸಿದರು.

ಆದರೆ, ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರು ನ್ಯಾಯಮೂರ್ತಿ ಬಾನು ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಾಜಿ ಆಸ್ಪತ್ರೆಯಲ್ಲಿರುವಷ್ಟು ದಿನ ಇಡಿ ಕಸ್ಟಡಿಯಿಂದ ಹೊರಗಿರಲಿದ್ದಾರೆ ನ್ಯಾ. ಚಕ್ರವರ್ತಿ ಹೇಳಿದರು. ಅಷ್ಟರೊಳಗೆ ಬಾಲಾಜಿ ಫಿಟ್ ಆಗಿದ್ದರೆ ಹತ್ತು ದಿನಗಳಲ್ಲಿ ಮತ್ತೆ ಇಡಿ ಕಸ್ಟಡಿಗೆ ತೆರಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಪತ್ನಿ ಎಸ್ ಮೇಗಾಲಾ ಅವರು ಜೂನ್ 14 ರಂದು ನ್ಯಾಯಾಲಯದ ಮುಂದೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು.

ರಾಜ್ಯ ಸಾರಿಗೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಬಾಲಾಜಿಯನ್ನು ಬಂಧಿಸಿದ ಸಂಸ್ಥೆ, ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಕೂಡ ಬಾಲಾಜಿ ಅವರನ್ನು ಸ್ಥಳಾಂತರಿಸಲು ಅನುಮತಿ ನೀಡಿತ್ತು.