ಹುಬ್ಬಳ್ಳಿ (ಜು.24) : ಏನ್ ಮಾಡೋದ್ರಿ ಈ ರೈತಾಪಿ ಜೀವನಾನೇ ಸಾಕಾಗಿ ಹೋಗೈತ್ರಿ… ಎಲ್ಲರಿಗೂ ಅನ್ನಾ ನೀಡೋ ಈ ಕೈ ಈಗ ತುತ್ತು ಅನ್ನಕ್ಕಾಗಿ ಸಿಟಿಗೆ ಬಂದು ಕೈ ಚಾಚೂ ಹಾಂಗ್ ಆಗೈತ್ರಿ. ಹಿಂಗ ಪರಿಸ್ಥಿತಿ ಮುಂದುವರದ್ರ ಅನ್ನದಾತನ ಬಾಯಿಗೆ ಹಿಡಿಮಣ್ಣು ಹಾಕ್ಕೊಳ್ಳೊ ಪರಿಸ್ಥಿತಿ ಬರ್ತೈತ್ರಿ…
ಕಳೆದ ಹಲವು ದಿನಗಳಿಂದ ಮಳೆಯಾಗದೆ ಭಾಗಶಃ ಮುಂಗಾರು ಕೈಕೊಟ್ಟಹಿನ್ನೆಲೆಯಲ್ಲಿ ಶಿರಗುಪ್ಪಿ ಗ್ರಾಮದ ರೈತ ಅಮರಪ್ಪ ಎಂಬುವವರು ಕೆಲಸ ಅರಸಿ ನಿತ್ಯವೂ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಕನ್ನಡಪ್ರಭ ಪ್ರತಿನಿಧಿ ಮಾತನಾಡಿಸಿದ ವೇಳೆ ಹೇಳಿದ ಮಾತಿದು.
ಹಲವು ದಿನಗಳಿಂದ ಜಿಲ್ಲೆಯಲ್ಲಿ ವರುಣನ ಚೆಲ್ಲಾಟದಿಂದ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾಲಕಾಲಕ್ಕೆ ಮಳೆಯಾಗುತ್ತದೆ ಎಂಬ ನಂಬಿಕೆಯ ಮೇಲೆ ಈಗಾಗಲೇ ರೈತರು ಭೂಮಿಯನ್ನು ಸ್ವಚ್ಛಗೊಳಿಸಿ ಒಣಭೂಮಿಯಲ್ಲಿಯೇ ಬಿತ್ತನೆ ಮಾಡಿದ್ದಾರೆ. ಹಲವು ದಿನಗಳು ಕಳೆದರೂ ಇಂದಿಗೂ ವರುಣನ ಕೃಪೆ ತೋರದಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆ ಮೊಟಕುಗೊಳಿಸಿ ಕೂಲಿ ಕೆಲಸ ಅರಸಿ ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ.
ಬೆಳಗಾದರೆ ಸಾಕು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಗದಗ ರಸ್ತೆಗೆ ಹೊಂದಿಕೊಂಡಿರುವ ಬ್ರಿಡ್ಜ್ ಪಕ್ಕದಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯ ಕಾರ್ಮಿಕರು ಕಾಣಸಿಗುತ್ತಾರೆ. ಇವರಲ್ಲಿ ಬಹುತೇಕರು ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು. ಈ ಹಿಂದೆ ಪ್ರತಿದಿನ 400ರಿಂದ 500 ಜನ ಕಾರ್ಮಿಕರು ಕಾಣಸಿಗುತ್ತಿದ್ದರು. ಆದರೆ, ಈಗ ನಿತ್ಯವೂ 1200ರಿಂದ 1500ಕ್ಕೂ ಅಧಿಕ ಜನರು ಉದ್ಯೋಗಕ್ಕಾಗಿ ಕಾದು ಕುಳಿತಿರುವುದು ಕಂಡುಬರುತ್ತಿದೆ.
ಹುಬ್ಬಳ್ಳಿ- ಧಾರವಾಡ ಅಷ್ಟೇ ಅಲ್ಲದೇ ಪಕ್ಕದ ಜಿಲ್ಲೆಗಳಾದ ಗದಗ, ಹಾವೇರಿ ಜಿಲ್ಲೆಗಳ ಹಲವು ಗ್ರಾಮಗಳಿಂದ ರೈಲ್ವೆ ಹಾಗೂ ಟ್ರಕ್‌ಗಳಲ್ಲಿ ನಿತ್ಯವೂ ಹುಬ್ಬಳ್ಳಿಗೆ ಕೆಲಸ ಅರಸಿ ಬರುತ್ತಾರೆ. ಇದರಲ್ಲಿ ಹೆಚ್ಚಾಗಿ ಹುಬ್ಬಳ್ಳಿ ಪಕ್ಕದ ಕುಸುಗಲ್ಲ, ಕಿರೇಸೂರ, ಹೆಬಸೂರ, ಕರ್ಲವಾಡ, ಅರೆಕುರಹಟ್ಟಿ, ಯಮನೂರ, ಮೊರಬ, ಪಡೇಸೂರ, ಕುಮಾರಗೊಪ್ಪ, ನವಲಗುಂದ, ನಾಗರಳ್ಳಿ, ಇಂಗಳಳ್ಳಿ, ಶಿಶುವಿನಹಳ್ಳಿ, ಭದ್ರಾಪುರ, ಮಣಕವಾಡ, ಶಿರಗುಪ್ಪಿ, ಅಣ್ಣಿಗೇರಿ, ಹುಲಕೋಟಿ, ಗದಗ- ಬೆಟಗೇರಿ, ಮಿಶ್ರಿಕೋಟಿ, ಚವರಗುಡ್ಡ, ಚಳಮಟ್ಟಿ, ಅಂಚಟಗೇರಿ, ಗಬ್ಬೂರು, ಕುರ್ಡಿಕೇರಿ, ಅದರಗುಂಚಿ, ಕಟ್ನೂರು, ಕಲಘಟಗಿ, ತಡಸ, ಹೆಬ್ಬಳ್ಳಿ ಸೇರಿದಂತೆ ನೂರಾರು ಗ್ರಾಮಗಳಿಂದ ನಿತ್ಯವೂ ಹುಬ್ಬಳ್ಳಿಗೆ ಆಗಮಿಸುತ್ತಾರೆ.
ಕೆಲಸವನ್ನು ಅರೆಸಿ ಹುಬ್ಬಳ್ಳಿಗೆ ಬರುವ ಎಲ್ಲರಿಗೂ ಕೆಲಸ ಸಿಗುವ ಭರವಸೆಯಿಲ್ಲ. ರೈಲ್ವೆ ನಿಲ್ದಾಣದ ಬಳಿ ನಿಂತಿರುವ ಸಾವಿರಾರು ಕಾರ್ಮಿಕರ ಹತ್ತಿರ ಬರುವ ಗುತ್ತಿಗೆದಾರರು ಅವರಿಗೆ ಬೇಕಾದ ಬೆರಳೆಣಿಕೆಯಷ್ಟುಜನರನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಹೀಗೆ ನೂರಾರು ಗುತ್ತಿಗೆದಾರರು ಇಲ್ಲಿಗೆ ಆಗಮಿಸಿ ಕಾರ್ಮಿಕರನ್ನು ಕರೆದುಕೊಂಡು ಹೋಗುವುದು ಸಾಮಾನ್ಯ.ಕೆಲವು ಬಾರಿ ನೂರಾರು ಜನರು ಕೆಲಸವಿಲ್ಲದೇ ಮಧ್ಯಾಹ್ನದ ವರೆಗೆ ಕಾದು ಮರಳಿ ಊರಿಗೆ ಹೋಗುವುದು ಸರ್ವೇ ಸಮಾನ್ಯ.
ಒಟ್ಟಾರೆ ಈ ವರ್ಷ ಮುಂಗಾರು ಬಿತ್ತನೆಯಾದ ನಂತರ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ಬಿತ್ತಿದ ಬೀಜವೂ ಹಾಳಾಗಿ ಹೋಗಿದ್ದು. ನಿತ್ಯ ಜೀವನದ ಬಂಡಿ ಸಾಗಿಸಲು ಅನ್ನದಾತ ಈಗ ಕೂಲಿ ಕೆಲಸಕ್ಕೆ ನಗರ ಪ್ರದೇಶದತ್ತ ಮುಖ ಮಾಡಿರುವುದು ಕಂಡುಬರುತ್ತಿದೆ.
ಮಳೆ ಬಂದ್ರೂ, ಬರದೇ ಇದ್ದರೂ ನಷ್ಟಾಅನುಭವಿಸೋದು ರೈತರೇ. ಮುಂಗಾರು ಮಳಿ ಆಗುತ್ತಂತ ಹೊಲ್ದಾಗ ಹೆಸರು ಬೀಜಾ ಬಿತ್ತಿದ್ದೆ. ಆದ್ರ ಮಳೆಯಾಗದ ಬೀಜ ಹಾಳಾಗ್ಯಾವ್. ಹಿಂಗ ಮುಂದುವರದ್ರ ರೈತಾಕಿ ಕೆಲ್ಸಾ ಬಿಟ್ಟು ಬ್ಯಾರೆ ಉದ್ಯೋಗ ನೋಡ್ಕೋಬೇಕ್ರಿ.
– ಮಲ್ಲಪ್ಪ ಶಿವಪೂರ, ಕಲಘಟಗಿ ರೈತ
ಈ ಸಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು. ಆದಷ್ಟುಬೇಗ ಸರ್ಕಾರ ಬರಗಾಲ ಘೋಷಿಸಿ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು. ಹೊಲದಲ್ಲಿ ನಾನೇ ನಿತ್ಯ ಹತ್ತಾರು ಜನರಿಗೆ ಕೆಲಸ ನೀಡುತ್ತಿದ್ದೆ. ಆದರೆ, ಇಂದು ನಾನೇ ಕೆಲಸ ಅರಸಿ ನಗರಕ್ಕೆ ಬರುವ ಪರಿಸ್ಥಿತಿ ಎದುರಾಗಿದೆ.