ತಂತಿಯೇ ಇಲ್ಲದ ವಿದ್ಯುತ್ ಕಂಬ ಹತ್ತಿ ಪೊಲೀಸರ ವಿರುದ್ಧ ಪ್ರತಿಭಟಿಸಿದ ಮಹಿಳೆ

ಮಾಜಿ ಕೌನ್ಸಿಲರ್ ಸಹೋದರನ ಮೇಲೆ ನಡೆದ ಹಲ್ಲೆಗೂ ತನ್ನ ಪತಿ ಹಾಗೂ ಮಗನನಿಗೂ ಸಂಬಂಧವಿಲ್ಲ ಅವರ ಹೆಸರನ್ನು ಎಫ್​ಐಆರ್​ನಿಂದ ತೆಗೆದುಹಾಕುವಂತೆ ಒತ್ತಾಯಿಸಿ ಮಹಿಳೆಯು  ಏರಿದ್ದಾರೆ. ಘಟನೆ ಹರ್ಯಾಣದ ಫರಿದಾಬಾದ್​ನಲ್ಲಿ ನಡೆದಿದೆ, 56 ವರ್ಷದ ಮಹಿಳೆ ತಂತಿಯೇ ಇಲ್ಲದ 60 ಅಡಿ ಎತ್ತರದ ವಿದ್ಯುತ್ ಕಂಬವನ್ನು ಹತ್ತಿ ಪ್ರತಿಭಟಿಸಿದ್ದಾರೆ. ಸೆಕ್ಟರ್ 29 ಬೈಪಾಸ್ ರಸ್ತೆ ಬಳಿ ಬೆಳಗ್ಗೆ ಈ ಘಟನೆ ನಡೆದಿದೆ.

ಮಾವಾಯಿ ಗ್ರಾಮದಲ್ಲಿ ಮಾಜಿ ಕೌನ್ಸಿಲರ್ ಸಹೋದರರ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿಯ ಪತ್ನಿ , ತನ್ನ ಪತಿ ಮತ್ತು ಮಗನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೂರಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಮಹಿಳೆಯನ್ನು ಎರಡು ಗಂಟೆಗಳ ಪ್ರಯತ್ನದ ನಂತರ ಕೆಳಗಿಳಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಮನೆಗೆ ಕಳುಹಿಸಿದ್ದಾರೆ. ಮೇ 21 ರಂದು, ಮಾಜಿ ಕೌನ್ಸಿಲರ್ ಬಿಜೇಂದರ್ ಶರ್ಮಾ ಅವರ ಸಹೋದರರನ್ನು ಥಳಿಸಿದ್ದಕ್ಕಾಗಿ ಸತ್ವೀರ್ ಭಾಟಿ, ಅವರ ಪುತ್ರ ಮತ್ತು ಇತರರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು.

ಸೆಕ್ಟರ್-17 ಅಪರಾಧ ವಿಭಾಗದ ಪೊಲೀಸರು ಆರೋಪಿಗಳಾದ ಅಭಯ್, ಲೋಕೇಶ್ ಅಲಿಯಾಸ್ ಲೌಕಿ, ರಾಕೇಶ್ ಅಲಿಯಾಸ್ ಲುಕ್ಕಿ ಮತ್ತು ಲೋಕೇಶ್ ಅವರನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ಪ್ರಮುಖ ಆರೋಪಿ ಸತ್ವೀರ್ ಭಾಟಿ ಮತ್ತು ಆತನ ಪುತ್ರರನ್ನು ಬಂಧಿಸಿಲ್ಲ ಎಂದು ಬಿಜೇಂದರ್ ಶರ್ಮಾ ಮತ್ತು ಆತನ ಕುಟುಂಬದವರು ಆರೋಪಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶರ್ಮಾ ಮತ್ತು ಅವರ ಕುಟುಂಬಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದರು. ಸೋಮವಾರ ಮುಂಜಾನೆ 5.30 ರ ಸುಮಾರಿಗೆ ಆರೋಪಿ ಸತ್ವೀರ್ ಭಾಟಿಯ ಪತ್ನಿ ಮೆಹಕ್ ಅವರು ಸೆಕ್ಟರ್ 29 ರ ಬಳಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಸ್ಥಳದಲ್ಲಿ ವಿದ್ಯುತ್ ಕಂಬವನ್ನು ಏರಿದ್ದರು, ಆದರೆ ಕಂಬಕ್ಕೆ ತಂತಿ ಸಂಪರ್ಕವಿರಲಿಲ್ಲ.

ರಸ್ತೆ ನಿರ್ಮಾಣ ಸಂಸ್ಥೆಯ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಗಮನಿಸಿ ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆಯನ್ನು ಆಕೆಯ ಸಂಬಂಧಿಕರೊಂದಿಗೆ ದೂರವಾಣಿ ಮೂಲಕ ಮಾತನಾಡುವಂತೆ ಮಾಡಿ ನಂತರ ಹಗ್ಗ ಬಿಗಿದು ಕೆಳಗೆ ಇಳಿಸಲಾಗಿದೆ.