ಗೋಕರ್ಣ: ಶ್ರೀಕ್ಷೇತ್ರ ಬ್ರಾಹ್ಮಣ ಪರಿಷತ್ ವತಿಯಿಂದ ಇಲ್ಲಿನ ಮಹಾಗಣಪತಿ ದೇವಾಲಯದಲ್ಲಿ ಸೋಮವಾರ ಮುಂಜಾನೆಯಿಂದ ಪ್ರಾರಂಭವಾದ ಯಾಮ ಪೂಜೆ ಇಂದು ಬೆಳಗ್ಗೆ ಸಂಪನ್ನಗೊಂಡಿತು. ಹಿರೇ, ಅಡಿ, ಉಪಧ್ಯಾಯ ಗೋಪಿಮನೆ ಸೇರಿದಂತೆ ಇಲ್ಲಿನ ವಿವಿಧ ವೈದಿಕ ಕುಟುಂಬದವರು ಪೂಜಾ ಕೈಂಕರ್ಯ ನೆರವೇರಿಸಿದರು. ನಿರಂತರ ಎಂಟು ಯಾಮ ಅಂದರೆ 24 ಗಂಟೆ ಜಪ, ಸೇರಿದಂತೆ ವಿವಿಧ ದೈವಿಕ ಕಾರ್ಯಗಳು ನೇರವರಿತು.
ಋಗ್ವೇದ ಸಂಹಿತಾ ವೇದ ಪಾರಾಯಣ ಸಹ ನಡೆಯಿತು. ಪ್ರತಿ ಮೂರು ತಾಸು ಅಂದರೆ ಒಂದು ಯಾಮಕ್ಕೆ ದೇವರಿಗೆ ಪೂಜೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮಂಗಳವಾರ ಮುಂಜಾನೆ ಹೋಮ ಹವನದೊಂದಿಗೆ ಯಾಮಪೂಜೆ ಸುಸಂಪನ್ನವಾಯಿತು. ಬ್ರಾಹ್ಮಣ ಪರಿಷತನಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಪ್ರತಿ ವರ್ಷ ಆಷಾಡ ಮಾಸದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ಕೆ ಹರಿಹರೇಶ್ವರ ವೇದ ಪಾಠಶಾಲೆಯ ಪ್ರಾಚಾರ್ಯ ವೇ.ಉದಯ ಮಯ್ಯರ ಮತ್ತು ವಿದ್ಯಾರ್ಥಿಗಳು ಸಹಕಾರ ನೀಡಿದರು. ಇವರ ಜೊತೆ ಬ್ರಾಹ್ಮಣ ಪರಿಷತ್ ಪದಾಧಿಕಾರಿಗಳು, ಸದಸ್ಯರು, ಊರ ವೈದಿಕರು ಸಹಕರಿಸಿದರು.